ADVERTISEMENT

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 20:11 IST
Last Updated 26 ಮಾರ್ಚ್ 2021, 20:11 IST

ಬೆಂಗಳೂರು: ರಾಜ್ಯದ ಬಹುತೇಕ ಎಂಜಿನಿಯರ್‌ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದು, ಎರಡಂಕಿಯಷ್ಟು ದಾಖಲಾತಿಗಳೂ ನಡೆದಿಲ್ಲ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2020ರ ಸಿಇಟಿ ಮೂಲಕ ದಾಖಲಾತಿ ಪಡೆದವರ ಸಂಖ್ಯೆ ಬಹುತೇಕ ಕಾಲೇಜುಗಳಲ್ಲಿ ಒಂದಂಕಿಯಷ್ಟಿದೆ.

ವಿವಿಧ ಕೋರ್ಸ್‌ಗಳಿಗೆ 150ಕ್ಕೂ ಹೆಚ್ಚು ಸೀಟುಗಳು ಲಭ್ಯವಿದ್ದರೂ ಕೆಲವು ಕಾಲೇಜುಗಳಲ್ಲಿ 20 ವಿದ್ಯಾರ್ಥಿಗಳೂ ದಾಖಲಾಗಿಲ್ಲ ಎಂಬುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತವೆ.

ADVERTISEMENT

‘ರಾಜ್ಯದಲ್ಲಿ 280 ಎಂಜಿನಿಯರಿಂಗ್ ಕಾಲೇಜುಗಳಿವೆ. ಇದರಲ್ಲಿ 15 ಕಾಲೇಜುಗಳಲ್ಲಿ ಒಂದಂಕಿಯೊಳಗೆ ದಾಖಲಾತಿಗಳು ನಡೆದಿದ್ದರೆ, 28ಕ್ಕೂ ಹೆಚ್ಚು ಕಾಲೇಜುಗಳಲ್ಲಿ 20ಕ್ಕೂ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದು ಕೆಇಎ ಮೂಲಗಳು ಹೇಳಿವೆ.

‘ಎಂಜಿನಿಯರಿಂಗ್‌ನಲ್ಲಿನ ಹಲವು ಕೋರ್ಸ್‌ಗಳು ಬೇಡಿಕೆ ಕಳೆದುಕೊಂಡಿವೆ. ಪಾಲಿಮರ್‌ ಟೆಕ್ನಾಲಜಿ, ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್, ಕನ್‌ಸ್ಟ್ರಕ್ಷನ್‌ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್, ಸಿಲ್ಕ್ ಟೆಕ್ನಾಲಜಿ, ಸೆರಾಮಿಕ್ಸ್‌, ಮೈನಿಂಗ್‌ನಂತಹ ಕೋರ್ಸ್‌ಗಳಿಗೆ ಒಬ್ಬರೂ ದಾಖಲಾಗಿಲ್ಲ. ಇಂತಹ ಕೋರ್ಸ್‌ಗಳನ್ನು ಮುಂದಿನ ಬಾರಿಯಿಂದ ತೆಗೆಯಬೇಕು ಎಂದು ಉನ್ನತ ಶಿಕ್ಷಣ ಇಲಾಖೆಗೆ ಕೆಎಇಯಿಂದ ವರದಿ ನೀಡಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.