ADVERTISEMENT

ವೆಸ್ಟ್‌ ಇಂಡೀಸ್‌ ಸೇರಿದ ಮೆಡಿಕಲ್ ಸೀಟ್ ವಂಚಕ!

ಬೆಂಗಳೂರಿನಲ್ಲಿ ವಂಚಕರ ಜಾಲ l 200 ಮಂದಿಯಿಂದ ₹40 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 19:58 IST
Last Updated 29 ಸೆಪ್ಟೆಂಬರ್ 2018, 19:58 IST
ಕಿಂಗ್‌ಪಿನ್‌ ವೆಂಕಟ್‌
ಕಿಂಗ್‌ಪಿನ್‌ ವೆಂಕಟ್‌   

ಬೆಂಗಳೂರು: ವಿದೇಶದ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ತಮಿಳುನಾಡಿನ ನ್ಯಾಯಾಧೀಶರು ಸೇರಿದಂತೆ 200ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿದ್ದ ಬೃಹತ್ ಜಾಲವೊಂದು ಮಡಿವಾಳ ಪೊಲೀಸರ ಬಲೆಗೆ ಬಿದ್ದಿದೆ.

ಆಂಧ್ರಪ್ರದೇಶದ ಏಡುಕೊಂಡಲು, ಆತನ ಮಗ ದಿಲೀಪ್, ಬೆಂಗಳೂರಿನ ಬಾಪೂಜಿನಗರದ ಸುಮನ್ ಅಲಿಯಾಸ್ ಶಯಿಸ್ತಾ, ಸದ್ದುಗುಂಟೆಪಾಳ್ಯದ ರಂಗನಾಯಕಲು ಅಲಿಯಾಸ್ ರಂಗ, ಇಷಾಕ್ ಪಾಷಾ ಹಾಗೂ ಹಳೆಗುಡ್ಡದಹಳ್ಳಿಯ ಆಯೇಷಾ ಭಾನು ಎಂಬಾಕೆಯನ್ನು ಬಂಧಿಸಲಾಗಿದೆ. ದಂಧೆಯ ಕಿಂಗ್‌ಪಿನ್ ಗೋಪಾಲ್ ವೆಂಕಟರಾವ್ ಅಲಿಯಾಸ್ ವೆಂಕಟ್ ಹಾಗೂ ಆತನ ಪತ್ನಿ ನಿಖಿಲಾ ವೆಸ್ಟ್‌ಇಂಡೀಸ್‌ನಲ್ಲಿದ್ದಾರೆ ಎಂದು ಪೊಲೀಸರು ಹೇಳಿದರು.

ವಾಷಿಂಗ್ಟನ್ ಯೂನಿವರ್ಸಿಟಿ ಆಫ್ ಬಾರ್ಬಡಸ್, ಗಯಾನಾ ಯೂನಿವರ್ಸಿಟಿ, ಅಲೆಗ್ಸಾಂಡರ್ ಯೂನಿವರ್ಸಿಟಿ ಆಫ್ ಅಮೆರಿಕ ಹಾಗೂ ಚೀನಾದ ತಿಯಾಂಜಿನ್ ಮೆಡಿಕಲ್ ಯೂನಿವರ್ಸಿಟಿಗಳಲ್ಲಿ ಸೀಟು ಕೊಡಿಸುವುದಾಗಿ ಒಬ್ಬೊಬ್ಬರಿಂದ ₹ 20 ರಿಂದ ₹ 30 ಲಕ್ಷದವರೆಗೆ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಏಳು ವರ್ಷಗಳಿಂದ ದಂಧೆ: ಆಂಧ್ರಪ್ರದೇಶದ ವೆಂಕಟ್ ಹಾಗೂ ನಿಖಿಲಾ, 2011ರಲ್ಲಿ ‘ನಾರ್ತ್‌ ಅಮೆರಿಕನ್ ಸರ್ವಿಸ್ ಸೆಂಟರ್’ (ಎನ್‌ಎಎಸ್‌ಸಿ) ಕನ್ಸಲ್ಟೆನ್ಸಿ ಕಂಪನಿ ಪ್ರಾರಂಭಿಸಿದ್ದರು. ನೂರಕ್ಕೂ ಹೆಚ್ಚು ಮಧ್ಯವರ್ತಿಗಳನ್ನು ಇಟ್ಟುಕೊಂಡಿದ್ದ ಅವರು, ಶಿಬಿರಗಳನ್ನು ಆಯೋಜಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ತಮ್ಮತ್ತ ಸೆಳೆಯುತ್ತಿದ್ದರು. ಅಲ್ಲದೆ, ಕೆಲ ಸುದ್ದಿ ವಾಹಿನಿಗಳಿಗೆ ಹಣ ಕೊಟ್ಟು, ‘ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಆಸೆಯೇ’ ಎಂದು ಗಂಟೆಗಟ್ಟಲೇ ಕಾರ್ಯಕ್ರಮ ಮಾಡಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಕ್ರಮೇಣ ವಿದ್ಯಾರ್ಥಿಗಳು ಹಾಗೂ ಪೋಷಕರು ಇವರನ್ನು ಸಂಪರ್ಕಿಸಲು ಶುರು ಮಾಡಿದ್ದರು. ವೆಂಕಟ್ ದಂಪತಿ ಆಗಲೇ ಬೆಂಗಳೂರು, ಚೆನ್ನೈ, ಕೊಯಮತ್ತೂರು ಹಾಗೂ ತಿರುಪತಿಯಲ್ಲಿ ಕಚೇರಿಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲು ಪ್ರಾರಂಭಿಸಿದ್ದರು.

ವರ್ಷ ಕಳೆದರೂ ಸೀಟು ಕೊಡಿಸದಿದ್ದಾಗ ಕೆಲವರು ಚೆನ್ನೈ ಪೊಲೀಸರಿಗೆ ದೂರು ಕೊಟ್ಟರು. ಆಗ ಕಚೇರಿಗಳನ್ನು ಬಂದ್ ಮಾಡಿ ತಲೆಮರೆಸಿಕೊಂಡಿದ್ದ ದಂಪತಿ, ಎನ್‌ಎಎಸ್‌ಸಿ ಹೆಸರನ್ನು ಬದಲಾಯಿಸಿ ಆರು ತಿಂಗಳ ಬಳಿಕ ಬೇರೆ ಸ್ಥಳಗಳಲ್ಲಿ ‘ಮೆಡಿಕಲ್ ಟೀಚರ್ಸ್’ ಹಾಗೂ ‘ರೂಟ್ ಟೀಚರ್ಸ್‌’ ಹೆಸರುಗಳಲ್ಲಿ ಕನ್ಸಲ್ಟೆನ್ಸಿಗಳನ್ನು ತೆರೆದು ವಂಚನೆ ಮುಂದುವರಿಸಿದ್ದರು. ಆಡುಗೋಡಿಯಲ್ಲೂ ಕಂಪನಿಯ ಒಂದು ಶಾಖೆ ಇತ್ತು.

ಬೆಂಗಳೂರಲ್ಲೂ ಕಂಪನಿಗಳು: ವೆಂಕಟ್ ತನ್ನ ಅಕ್ಕನ ಗಂಡ ಏಡುಕೊಂಡಲು ಮೂಲಕ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ‘ಡಾಕ್ಟರ್ಸ್ ವರ್ಲ್ಡ್‌’ ಹಾಗೂ ಜಯನಗರದಲ್ಲಿ ‘U-CAN ಎಜುಕೇಷನ್’ ಕನ್ಸಲ್ಟೆನ್ಸಿ ಪ್ರಾರಂಭಿಸಿದ್ದ. ತಮ್ಮ ಕಂಪನಿಗಳ ಬಗ್ಗೆ ಪತ್ರಿಕೆಗಳು, ವಾಹಿನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ನಿರಂತರವಾಗಿ ಪ್ರಚಾರ ಮಾಡುತ್ತಿದ್ದರಿಂದ, ಅದನ್ನು ನೋಡಿ ವಿದ್ಯಾರ್ಥಿಗಳೇ ಇವರನ್ನು ಸಂಪರ್ಕಿಸುತ್ತಿದ್ದರು.

ಕಚೇರಿಗೆ ಬರುತ್ತಿದ್ದ ವಿದ್ಯಾರ್ಥಿಗಳ ಜತೆ ಆಯೇಷಾ ಭಾನು ಸಮಾಲೋಚನೆ ನಡೆಸುತ್ತಿದ್ದಳು. ‘ರಾಜ್ಯದ ಯಾವುದೇ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದರೂ ಕನಿಷ್ಠ ₹ 50 ಲಕ್ಷ ಖರ್ಚಾಗುತ್ತದೆ. ನಾವು ₹ 25 ಲಕ್ಷಕ್ಕೇ ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಸೀಟು ಕೊಡಿಸುತ್ತೇವೆ’ ಎಂದು ಹೇಳಿ ಅವರನ್ನು ಸೆಳೆಯುತ್ತಿದ್ದಳು.

ವಿದೇಶಕ್ಕೂ ಕರೆದೊಯ್ಯುತ್ತಿದ್ದರು:‘ವಿದ್ಯಾರ್ಥಿಗಳು ಹಣ ಕಟ್ಟಿದ ಬಳಿಕ ಪ್ರವಾಸಿ ವೀಸಾದಡಿ ಅವರನ್ನು ಅಮೆರಿಕ, ಚೀನಾ, ಗಯಾನ ರಾಷ್ಟ್ರಗಳಿಗೆ ಕರೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಅಲ್ಲಿನ ವಿಶ್ವವಿದ್ಯಾಲಯಗಳನ್ನು ಹೊರಗಿನಿಂದ ತೋರಿಸಿ ಕರೆದುಕೊಂಡು ಬರುತ್ತಿದ್ದರು.

ಆರು ತಿಂಗಳಾದರೂ, ಪ್ರವೇಶ ಪ್ರಕ್ರಿಯೆಯಲ್ಲಿ ಪ್ರಗತಿ ಕಾಣದಿದ್ದಾಗ ಹಣ ಕೊಟ್ಟವರು ಪೊಲೀಸ್ ಠಾಣೆಗಳ ಮೆಟ್ಟಿಲೇರಿದ್ದರು. ಈ ಗ್ಯಾಂಗ್ ವಿರುದ್ಧ ಆಡುಗೋಡಿಯಲ್ಲಿ 12 ಹಾಗೂ ಮಡಿವಾಳ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು.

**

ಮಫ್ತಿಯಲ್ಲಿ ಕಚೇರಿಗಳಬಳಿ ಕಾದು ಹಿಡಿದ ಪೊಲೀಸರು

‘ಕೆಲ ದಿನಗಳಿಂದ ಆರೋಪಿಗಳು ಕಚೇರಿಗಳನ್ನು ಬಂದ್ ಮಾಡಿದ್ದರು. ಆದರೂ, ನಮ್ಮ ಸಿಬ್ಬಂದಿ ಮಫ್ತಿಯಲ್ಲಿ ಕಚೇರಿಗಳ ಬಳಿ ಸುತ್ತುತ್ತಿದ್ದರು. ಸೆ.20ರಂದು ಏಡುಕೊಂಡಲು ಆಡುಗೋಡಿಯ ಕಚೇರಿಗೆ ಬಂದಿದ್ದ. ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ದಂದೆಯ ಆಳ ಗೊತ್ತಾಯಿತು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಉಳಿದವರನ್ನೂ ಬಂಧಿಸಿದೆವು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

**

ನ್ಯಾಯಾಧೀಶರಿಂದಲೂ ದೂರು

ತಮಿಳುನಾಡಿನ ನ್ಯಾಯಾಧೀಶ ಡಿ.ಕುಲಶೇಖರನ್ ಅವರ ಮಗನಿಗೆ ಚೀನಾ ವಿಶ್ವವಿದ್ಯಾಲಯದಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಅವರಿಂದಲೂ ಆರೋಪಿಗಳು ₹ 10.60 ಲಕ್ಷ ಕಿತ್ತಿದ್ದರು. ಈ ಸಂಬಂಧ ಕುಲಶೇಖರನ್ ರಿಜಿಸ್ಟರ್ ಪೋಸ್ಟ್ ಮೂಲಕ ಮಡಿವಾಳ ಠಾಣೆಗೆ ದೂರು ಕಳುಹಿಸಿದ್ದರು.

**

ಈ ಜಾಲ ಸುಮಾರು ₹ 40 ಕೋಟಿಯಷ್ಟು ಹಣ ಸಂಗ್ರಹಿಸಿ ವಂಚಿಸಿದೆ. ಇವರಿಂದ ಮೋಸ ಹೋದವರು ಠಾಣೆಗೆ ಬಂದು ದೂರು ಕೊಡಬೇಕು
– ಮಡಿವಾಳ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.