ADVERTISEMENT

ಇನ್ನು ಮುಂದೆ ಪ್ರತಿ ತಿಂಗಳು ಗುರಿ ನಿಗದಿ: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 10:10 IST
Last Updated 12 ಜೂನ್ 2020, 10:10 IST
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್   

ಬಳ್ಳಾರಿ: ವಿಮ್ಸ್ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಗುರಿ ನಿಗದಿ ಮಾಡಲಾಗುವುದು. ಗುರಿ ಸಾಧಿಸದಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ‌ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ‌ ನೀಡಿದ್ದಾರೆ.

ನಗರದ ವಿಜಯನಗರ ‌ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಮ್ಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕರು‌ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ವಿಮ್ಸ್‌ಗೆ ಸಿಬ್ಬಂದಿ‌ ಭರ್ತಿ: ವಿಮ್ಸ್ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇದ್ದು ತೆರವಾದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ವಿಮ್ಸ್ ಸುಸಜ್ಜಿತವಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಎರಡ್ಮೂರ ತಿಂಗಳಲ್ಲಿ‌ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಟ್ರಾಮಾಕೇರ್ ಸೆಂಟರ್ ಉದ್ಘಾಟನೆ ಜುಲೈ.15ಕ್ಕೆ

ಬಳ್ಳಾರಿಯಲ್ಲಿ ₹ 150ಕೋಟಿ ವೆಚ್ಚದಲ್ಲಿ ‌ನಿರ್ಮಾಣವಾಗಿರುವ ಟ್ರಾಮಾಕೇರ್ ಸೆಂಟರ್ ಅಂತಿಮ ಹಂತದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳಿಂದ ಜುಲೈ 15ರಂದು ಉದ್ಘಾಟಿಸಲಾಗುವುದು ಎಂದು ಹೇಳಿದರು.

ಔಷಧಿ ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ರೂಪಿಸುವ‌ ಬಗ್ಗೆ ಪರಿಶೀಲಿಸಿ ಎಂದು ಇಲಾಖೆ ನಿರ್ದೇಶಕ ಡಾ.ಗಿರೀಶ್ ಅವರಿಗೆ ಸೂಚಿಸಿದರು.

ಅಭಿವೃದ್ಧಿ ಕಾಮಗಾರಿಗಳ ಹಂತವಾರು ಪ್ರಗತಿ ನೋಡಿಕೊಂಡು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕು ಎಂದರು.

ವಿಮ್ಸ್ ವೈದ್ಯರು ಹಾಜರಾತಿ ವಹಿಗೆ ಸಹಿ ಮಾಡಿ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಂಥವರ ಪಟ್ಟಿ ನೀಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಸ್ತುವಾರಿ ಸಚಿವ ಆನಂದ್ ಸಿಂಗ್, ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.