ADVERTISEMENT

ವಿಧಾನ ಪರಿಷತ್‌ಗೆ ನಾಮನಿರ್ದೇಶನ: ವಿವರ ಕೇಳಿದ ರಾಜ್ಯಪಾಲರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 16:31 IST
Last Updated 5 ಆಗಸ್ಟ್ 2023, 16:31 IST
ವಿಧಾನ ಸೌಧ
ವಿಧಾನ ಸೌಧ   

ಬೆಂಗಳೂರು: ವಿಧಾನ ಪರಿಷತ್‌ಗೆ ಎಂ.ಆರ್‌. ಸೀತಾರಾಮ್, ಮನ್ಸೂರ್ ಅಲಿ ಖಾನ್ ಮತ್ತು ಎಚ್‌.ಪಿ. ಸುಧಾಮ್ ದಾಸ್ ಹೆಸರು ನಾಮನಿರ್ದೇಶನ ಮಾಡಲು ಪರಿಗಣಿಸುವ ಮೊದಲು ಅವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರುಗಳನ್ನು ಪರಿಶೀಲಿಸಿ, ನಿಯಮಗಳನ್ವಯ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ರಾಜ್ಯಭವನ ಪತ್ರ ಬರೆದಿದೆ.

ರಾಜ್ಯಪಾಲರ ‍ಪರವಾಗಿ ವಿಶೇಷ ಕಾರ್ಯದರ್ಶಿ ಆರ್‌. ಪ್ರಭುಶಂಕರ್‌ ಅವರು ಆಗಸ್ಟ್‌ 4ರಂದು ಈ ಪತ್ರ ಬರೆದಿದ್ದಾರೆ.

‘ಶಿಕ್ಷಣ, ಸಹಕಾರ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರದ ಪ್ರತಿನಿಧಿಗಳಾಗಿ ಪರಿಷತ್‌ಗೆ ಈ ಮೂವರನ್ನು ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಗೊತ್ತಾಗಿದೆ. ಆದರೆ, ಅವರ ಮೇಲೆ ಕೆಲವು ಆರೋಪಗಳಿವೆ’ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಜನಜಾಗೃತಿ ವೇದಿಕೆ ಮತ್ತು ‘ನ್ಯಾಯಮಿತ್ರ’ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್‌ ಶಾಸ್ತ್ರಿ ಅವರು ಕೆಲವು ದಾಖಲೆಗಳ ಸಹಿತ ರಾಜ್ಯಪಾಲರಿಗೆ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು. ಈ ದೂರುಗಳ ಸಹಿತ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ADVERTISEMENT

ಮನ್ಸೂರ್‌ ಬದಲು ಉಮಾಶ್ರೀ?: ಈ ಮಧ್ಯೆ, ಮನ್ಸೂರ್ ಅಲಿ ಖಾನ್ ಬದಲು ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂದು ಗೊತ್ತಾಗಿದೆ.

ತೇರದಾಳ ಕ್ಷೇತ್ರದಿಂದ 2013ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಉಮಾಶ್ರೀ, 2018ರಲ್ಲಿ ಸೋಲು ಕಂಡಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ. ವಿಧಾನ ಪರಿಷತ್‌ ಸದಸ್ಯರಾಗಿ ನೇಮಕ ಮಾಡುವ ಬಗ್ಗೆ ಅವರಿಗೆ ಭರವಸೆ ನೀಡಲಾಗಿತ್ತು. ಉಮಾಶ್ರೀ ಬದಲು ಸಿದ್ದು ರಾಮಪ್ಪ ಕೊಣ್ಣೂರು ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಆದರೆ, ಬಿಜೆಪಿಯ ಸಿದ್ದು ಸವದಿ ವಿರುದ್ಧ ಕೊಣ್ಣೂರು ಸೋಲು ಕಂಡಿದ್ದರು. 

‘ಪರಿಷತ್‌ಗೆ ನಾಮ ನಿರ್ದೇಶನ ಮಾಡುವಂತೆ ಪಕ್ಷದ ವರಿಷ್ಠರ ಮೇಲೆ ಸಿದ್ದರಾಮಯ್ಯ ಒತ್ತಡ ಹೇರಿದ್ದರು. ಹೀಗಾಗಿ, ಮನ್ಸೂರ್‌ ಅಲಿ ಖಾನ್‌ ಬದಲು ಉಮಾಶ್ರೀ ಹೆಸರು ಶಿಫಾರಸು ಮಾಡುವ ಸಾಧ್ಯತೆಯಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕೆಲವು ತಿಂಗಳ ಹಿಂದೆಯೇ ಹಿಂದುಳಿದ ವರ್ಗಗಳ ಕೋಟಾದಿಂದ ಎಂ.ಆರ್‌. ಸೀತಾರಾಮ್‌, ಅಲ್ಪಸಂಖ್ಯಾತ ಕೋಟಾದಿಂದ ಮನ್ಸೂರ್‌ ಅಲಿ ಖಾನ್‌, ಪರಿಶಿಷ್ಟ ಜಾತಿ ಎಡಗೈ ಬಣದಿಂದ ಸುಧಾಮ್ ದಾಸ್ ಹೆಸರನ್ನು ಪರಿಷತ್‌ಗೆ ನಾಮ ನಿರ್ದೇಶನ ಮಾಡಲು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದರು. ಆದರೆ, ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಎಡಗೈ ಬಣದ ಪ್ರಮುಖ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.