ಬೆಂಗಳೂರು: ಮೆಟ್ರೊ ರೈಲು ಯೋಜನೆಯ ಈಗ ಚಾಲ್ತಿಯಲ್ಲಿರುವ ವಿವಿಧ ಮಾರ್ಗಗಳ ಕಾಮಗಾರಿಗಳು 2029 ರ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಹೇಳಿದರು.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಪ‍್ರಸ್ತಾಪಿಸಿದರು.
ಮೆಟ್ರೊ ಯೋಜನೆಯ ಹಂತ–2 ಎ ರಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರದವರೆಗೆ 19.75 ಕಿ.ಮೀ ಮತ್ತು ಹಂತ–2 ಬಿ ರಲ್ಲಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ ಕಾಮಗಾರಿ ನಡೆಯುತ್ತಿದ್ದು, ಒಟ್ಟು ₹14,788 ಕೋಟಿ ವೆಚ್ಚದ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದರು.
ಅದೇ ರೀತಿ, ಹಂತ–3 ಕಾರಿಡಾರ್ 1– ಕೆಂಪಾಪುರದಿಂದ ಜೆ.ಪಿ.ನಗರ 4 ನೇ ಹಂತದವರೆಗೆ 32.15 ಕಿ.ಮೀ ಮತ್ತು ಕಾರಿಡಾರ್ 2– ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.50 ಕಿ.ಮೀ, ಒಟ್ಟು 44.65 ಕಿ.ಮೀ ಉದ್ದದ ₹15,611 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಗಳನ್ನು ಡಿಸೆಂಬರ್ 29 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ರಾಜ್ಯಪಾಲರು ಎಂದರು.
ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೊ ಮತ್ತು ರಸ್ತೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು 40.50 ಕಿ.ಮೀ ಸಂಯುಕ್ತ ಮೆಟ್ರೊ ರಸ್ತೆ ಮೇಲ್ಸೇತುವೆ ಯೋಜನೆಯನ್ನು ₹8,916 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಪೆರಿಫೆರಲ್ ರಿಂಗ್ ರಸ್ತೆ ಭಾಗ–1 ರ ಯೋಜನೆಯನ್ನು ಕೈಗೊಳ್ಳಲು ಅಗತ್ಯವಿರುವ ₹27,000 ಕೋಟಿಯನ್ನು ಹುಡ್ಕೋ ಸಂಸ್ಥೆಯಿಂದ ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಲಾಗಿದೆ. ಈ ಸಾಲಕ್ಕೆ ಸರ್ಕಾರ ಭದ್ರತೆ ನೀಡಲಿದೆ ಎಂದರು.
ಯೋಜನೆ ಕಾರ್ಯಗತಗೊಳಿಸಲು 2,565 ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಕೈಗೊಳ್ಳಲು ಉದ್ದೇಶಿಸಲಾಗಿದೆ. ಸುಮಾರು 73 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದಾದ್ಯಂತ 34 ಸ್ಥಳಗಳಲ್ಲಿ ವಸತಿ ಸಮುಚ್ಛಯ ನಿರ್ಮಿಸಿ ಸುಮಾರು 30,000 ಫ್ಲಾಟ್‌ಗಳನ್ನು ಹಂಚುವ ಗುರಿ ಹಮ್ಮಿಕೊಂಡಿದೆ. ಈ ಪೈಕಿ ಈವರೆಗೆ 25 ಯೋಜನೆಗಳಲ್ಲಿ ಒಟ್ಟು 14,909 ಫ್ಲಾಟ್‌ಗಳ ನಿರ್ಮಾಣ ಕಾರ್ಯಕೈಗೊಂಡಿದ್ದು, 10,615 ಫ್ಲಾಟ್‌ಗಳ ನಿರ್ಮಾಣ ಕಾರ್ಯಪೂರ್ಣಗೊಂಡಿದೆ ಎಂದು ಹೇಳಿದರು.
ನಗರದಲ್ಲಿ ಸುಗಮ ಸಂಚಾರಕ್ಕಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಕೃತಕ ಬುದ್ದಿಮತ್ತೆ ಆಧಾರಿತ ಡೇಟಾ ಪ್ಲಾಟ್ ಫಾರಂ, ನೈಜ ಸಮಯದಲ್ಲಿ ಡೇಟಾವನ್ನು ಸಂಗ್ರಹಿಸಲು, ವಿಶ್ಲೇಷಿಸಲು ಮತ್ತು ತೆರವುಗೊಳಿಸಲು ಇದನ್ನು ಬಳಸಲಾಗುತ್ತಿದೆ ಎಂದು ಗೆಹಲೋತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.