ADVERTISEMENT

ಸಾಯಲು ಹೊರಟಾಕೆ ಈಗ ಸಾಧಕಿ: 'ಮಿಕ್ಕ ಬಣ್ಣದ ಹಕ್ಕಿ'ಯ ಮನ ಕಲಕುವ ಕತೆ

ಪ್ರವೀಣ ಕುಮಾರ್ ಪಿ.ವಿ.
Published 13 ನವೆಂಬರ್ 2019, 23:01 IST
Last Updated 13 ನವೆಂಬರ್ 2019, 23:01 IST
ಎಸ್‌. ಸೋನಿಯಾ- –ಪ್ರಜಾವಾಣಿ ಚಿತ್ರ
ಎಸ್‌. ಸೋನಿಯಾ- –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹುಟ್ಟಿನೊಂದಿಗೆ ಪಾಂಡುರೋಗ (ಆಲ್ಬಿನಿಸಂ) ಕಟ್ಟಿಕೊಂಡು ಬಂದ ಹುಡುಗಿ ಅವಳು. ಮುಜುಗರ, ಹೀಯಾಳಿಕೆಗಳಿಂದ ನೊಂದು ಇಹಲೋಕದ ಸಹವಾಸವೇ ಬೇಡ ಎಂದು ಬದುಕನ್ನೇ ಕೊನೆಗಾಣಿಸಲು ಮುಂದಾಗಿದ್ದಳು. ಸಾವಿನಮನೆ ಕದ ತಟ್ಟಿದಾಗ ಎದುರಾದ ಅನುಭವ ಆಕೆಯ ಬದುಕಿನ ಗತಿಯನ್ನೇ ಬದಲಿಸಿದೆ.

‘ಲೋಕದಲ್ಲಿ ನಿಂದಕರಿರಬಹುದು. ಕಾಳಜಿ ವಹಿಸುವ ಬಂಧುಗಳೂ ಹಲವರಿದ್ದಾರೆ’ ಎಂಬ ಜ್ಞಾನೋದಯ ಈ ಹುಡುಗಿಗೆ ಜೀವನ ಪ್ರೀತಿ ಉಕ್ಕುವಂತೆ ಮಾಡಿದೆ. ತಾನು ದ್ವೇಷಿಸುತ್ತಿದ್ದ ಜಗತ್ತನ್ನೇ ಏಕೆ ಇಷ್ಟಪಡಲಾರಂಭಿಸಿದೆ ಎಂಬುದನ್ನು ಕಟ್ಟಿಕೊಡಲು ‘ಆತ್ಮಕಥನ’ ರಚಿಸಿದ್ದಾಳೆ. ತಾನು ಅನುಭವಿಸಿದ ನೋವುಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾಳೆ.

ಕೆಂಗೇರಿ ಉಪನಗರದ ಎಸ್‌. ಸೋನಿಯಾ10ನೇ ತರಗತಿಯಲ್ಲಿರುವಾಗ ಪ್ರಕಟಿಸಿದ ‘ಮಿಕ್ಕ ಬಣ್ಣದ ಹಕ್ಕಿ’(ನಿರ್ಮಿತಿ ಪ್ರಕಾಶನ) ಕೃತಿ ಪಾಂಡುರೋಗಿಗಳಿಗೆ ಸಾಂತ್ವನ ಹೇಳುತ್ತದೆ. ಕನ್ನಡದಲ್ಲಿ ಆತ್ಮಕಥನ ರಚಿಸಿದ ಕಿರಿಯ ಲೇಖಕಿ (15 ವರ್ಷ 5 ತಿಂಗಳು) ಎಂಬ ಶ್ರೇಯವನ್ನು ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌’ ಸಂಸ್ಥೆ ಸೋನಿಯಾಗೆ ನೀಡಿದೆ.

ADVERTISEMENT

‘ಹುಟ್ಟಿನಿಂದ 9ನೇ ತರಗತಿವರೆಗಿನ ಅನುಭವ ಕೃತಿಯಲ್ಲಿವೆ’ ಎಂದು ಸೋನಿಯಾ ತಿಳಿಸಿದರು. ಈ ಕೃತಿ ರಚಿಸಿದ ಹಿನ್ನೆಲೆಯನ್ನು ಹಂಚಿಕೊಂಡರು.

‘ನನ್ನ ದೇಹದಲ್ಲಿ ಮೆಲನಿನ್‌ ಇಲ್ಲ. ಐದು ನಿಮಿಷ ಬಿಸಿಲಲ್ಲಿ ನಿಂತರೂ ಚರ್ಮ ಕೆಂಪಗಾಗುತ್ತದೆ. ಹೆಚ್ಚು ಹೊತ್ತಿದ್ದರೆ ಚರ್ಮವೇ ಕಿತ್ತುಹೋಗುತ್ತದೆ. ಹೊಸ ಚರ್ಮ ಬರುವವರೆಗೂ ನೋವು, ಕಣ್ಣುರಿ ಕಾಡುತ್ತದೆ. ಸಣ್ಣವಳಿದ್ದಾಗ ನನ್ನ ಬಣ್ಣ ನೋಡಿ ಯಾರಿಗೂ ಕೇಳದ ಪ್ರಶ್ನೆಗಳನ್ನು ಕೇಳಿದಾಗಲೆಲ್ಲಾ ಅಭದ್ರತೆ ಕಾಡುತ್ತಿತ್ತು. ಶಾಲೆಯಲ್ಲಿ ಸಹಪಾಠಿಗಳು ವಿಚಿತ್ರವಾಗಿ ನೋಡುತ್ತಿದ್ದರು. ಏಳನೆ ತರಗತಿಯಲ್ಲಿದ್ದಾಗ ಸಾಯುವ ನಿರ್ಧಾರ ತಳೆದಿದ್ದೆ. ಬದುಕು ಇಷ್ಟವಿಲ್ಲ. ಕ್ಷಮಿಸಿ ಎಂದು ಪತ್ರ ಬರೆದಿಟ್ಟು ಅಳುತ್ತಾ ಶಾಲೆ ಹತ್ತಿರದ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿದ್ದೆ. ಭಗವಂತಾ ನಿನಗೂ ಬೇಡವಾದೆನಾ ಎಂದು ರಾತ್ರಿ 8.30ರವರೆಗೆ ಅಲ್ಲೇ ಬಿಕ್ಕಿದ್ದೆ.’

‘ಗೆಳತಿಯಂತಿದ್ದ ಅಮ್ಮ ನನಗೆ ಸಿಕ್ಕಾಪಟ್ಟೆ ಇಷ್ಟ. ಆಕೆಯ ಮುಖ ನೋಡಿ ಸಾಯುತ್ತೇನೆ ಎಂದುಕೊಂಡು ಮನೆಯತ್ತ ಹೊರಟೆ. ಅಷ್ಟರಲ್ಲೇ ಮನೆಯವರೆಲ್ಲ ನನ್ನನ್ನು ಹುಡುಕಲಾರಂಭಿಸಿದ್ದರು. ಕತ್ತಲಲ್ಲಿ ಅಂಜಿಕೆಯಲ್ಲೇ ಹೆಜ್ಜೆ ಹಾಕುತ್ತಿದ್ದಾಗ ಅತ್ತೆ ಎದುರಾದರು. ಕಾಯಿನ್‌ ಬೂತ್‌ನಿಂದ ಮನೆಗೆ ಕರೆ ಮಾಡಿದರು. ಮನೆಯವರೆಲ್ಲ ಅಲ್ಲಿಗೇ ಧಾವಿಸಿದರು. ಅಮ್ಮನನ್ನು ನೋಡುತ್ತಲೇ ಜೋರಾಗಿ ಅತ್ತೆ.’

‘ನಾನು ಪತ್ರ ಬರೆದಿಟ್ಟ ವಿಚಾರವನ್ನು ಅಮ್ಮ ಯಾರಿಗೂ ಹೇಳುವಂತಿರಲಿಲ್ಲ. ನಾನು ಸತ್ತಿದ್ದರೆ ಏನು ಮಾಡುತ್ತಿದ್ದೆ ಎಂದು ಅಮ್ಮನನ್ನು ಕೇಳಿದೆ. ‘ಮರುದಿನ ನಾನೂ ಇರುತ್ತಿರಲಿಲ್ಲ’ ಎಂದಾಗ ಮನಕರಗಿತು. ಗಟ್ಟಿ ಮನಸ್ಸಿನ ಅಪ್ಪನ ಕಣ್ಣಲ್ಲೂ ನೀರು ಜಿನುಗಿತು.’

‘ನಮ್ಮನ್ನು ಹೀಯಾಳಿಸುವವರ ಬಗ್ಗೆ ಮಾತ್ರ ಚಿಂತಿಸಿದ್ದೆ. ಕಾಳಜಿ ವಹಿಸುವವರ ಬಗ್ಗೆ ಯೋಚಿಸಿಯೇ ಇಲ್ಲವಲ್ಲಾ ಎಂದು ಬೇಸರವಾಯಿತು. ಈ ಆಲೋಚನೆಯೇ ನನ್ನಲ್ಲಿ ಬದುಕಿನ ಬಗ್ಗೆ ಸ್ಫೂರ್ತಿ ತುಂಬಿತು. ನನ್ನ ಅನುಭವಗಳನ್ನೆ ಹೊಸೆದು ರಚಿಸಿದ ಈ ಪುಸ್ತಕಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎಂದರು.

ಬೆಳ್ಳಿತೆರೆಗೆ ‘ಮಿಕ್ಕ ಬಣ್ಣದ ಹಕ್ಕಿ’
ಸೋನಿಯಾ ಅವರ ಆತ್ಮಕಥನ ‘ಮಿಕ್ಕ ಬಣ್ಣದ ಹುಡುಗಿ’ ಕೃತಿಯನ್ನು ಬೆಳ್ಳಿತೆರೆಗೆ ತರುವ ಪ್ರಯತ್ನವೂ ನಡೆದಿದೆ.

ಈ ಚಿತ್ರವನ್ನು ನಿರ್ದೇಶಿಸಲು ಮುಂದಾಗಿರುವುದು ಪೃಥ್ವಿ ಕೋಣನೂರು ನಿರ್ದೇಶನದ ‘ರೈಲ್ವೆ ಚಿಲ್ಡ್ಸನ್ಸ್‌’ ಸಿನಿಮಾದಲ್ಲಿ ಮುಖ್ಯಪಾತ್ರ ನಿರ್ವಹಿಸುವ ಮೂಲಕ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮನೋಹರ್‌. ಮನೋಹರ್‌ ಮತ್ತು ಸೋನಿಯಾ ಸೇರಿ ಚಿತ್ರಕತೆ ಸಿದ್ಧಪಡಿಸಿದ್ದಾರೆ.

‘ಮಿಕ್ಕ ಬಣ್ಣದ ಹಕ್ಕಿ ಆತ್ಮಕಥನ ಮನ ಕಲಕುವಂತಿದೆ. ಪಾಂಡುರೋಗದ ಬಗ್ಗೆ ಸಮಾಜದಲ್ಲಿ ಇರುವ ತಿಳಿವಳಿಕೆಯನ್ನು ತಿದ್ದುವ ಉದ್ದೇಶದಿಂದ ಈ ಕೃತಿಯನ್ನೇ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದ ಮುಖ್ಯ ಪಾತ್ರ ನಿರ್ವಹಿಸಬಲ್ಲ 11ರಿಂದ 16 ವರ್ಷಗಳ ಒಳಗಿನ ಪಾಂಡುರೋಗ ಹೊಂದಿರುವ ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ’ ಎಂದು ನ್ಯಾಷನಲ್‌ ಪಿ.ಯು. ಕಾಲೇಜಿನ ವಿದ್ಯಾರ್ಥಿ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂಗ್ಲಿಷ್‌ ವಿದ್ಯಾರ್ಥಿನಿಗೆ ಕನ್ನಡವೇ ಆಪ್ತ’
ಸೋನಿಯಾ ಓದಿದ್ದು ಅಂಚೆಪಾಳ್ಯದ ಸಂತ ಬೆನೆಡಿಕ್ಟರ ಅಕಾಡೆಮಿಯ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ. ಈಗ ಈಕೆ ಅದೇ ಸಂಸ್ಥೆಯ ಪಿ.ಯು. ವಿದ್ಯಾರ್ಥಿನಿ.

‘ನನ್ನ ತಾಯ್ನುಡಿ ಕನ್ನಡ. ಭಾವನೆಗಳನ್ನು ಇಂಗ್ಲಿಷ್‌ಗಿಂತ ಕನ್ನಡದಲ್ಲಿ ಆಪ್ತವಾಗಿ ವ್ಯಕ್ತಪಡಿಸಬಹುದು ಅನಿಸಿತು. ಹಾಗಾಗಿ ಕನ್ನಡದಲ್ಲೇ ಬರೆದೆ. ಈ ಕೃತಿಯನ್ನು ಇಂಗ್ಲಿಷ್‌ಗೂ ನಾನೇ ಭಾಷಾಂತರಿಸುತ್ತೇನೆ’ ಎಂದು ಸೋನಿಯಾ ಹೇಳಿದರು.

ಸೋನಿಯಾ ತಂದೆ ಶ್ರೀನಿವಾಸ್‌ ಉದ್ಯಮಿ. ತಾಯಿ ಶಿವರಾಜಮ್ಮ ಶಿಕ್ಷಕಿ. ಆಕೆಗೆ ಒಬ್ಬ ತಮ್ಮನೂ ಇದ್ದಾನೆ.

*
ಪೋಷಕರಿಂದಲೂ ಕಡೆಗಣನೆಗೆ ಒಳಗಾಗುವ ಪಾಂಡುರೋಗಿಗಳ ಪಾಡು ನನಗಿಂತ ಭೀಕರ. ಅಂಥವರ ಮನಸು ಅರ್ಥೈಸಲು ನನ್ನ ಕೃತಿ ನೆರವಾಗಲಿದೆ
-ಎಸ್‌. ಸೋನಿಯಾ, ‘ಮಿಕ್ಕ ಬಣ್ಣದ ಹಕ್ಕಿ’ ಕೃತಿಯ ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.