ಬೆಂಗಳೂರು: ‘ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದ ಹೊರತು ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊರಡಿಸಲಾಗಿರುವ ಉದ್ದೇಶಿತ ಕರಡು ಅಧಿಸೂಚನೆ ಅನ್ವಯ ಭವಿಷ್ಯದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ.
ಅಧಿಸೂಚನೆಗಳನ್ನು ಪ್ರಶ್ನಿಸಿ ಶಿವಮೊಗ್ಗ-ದಾವಣಗೆರೆಯ ನಂಜಪ್ಪ ಆಸ್ಪತ್ರೆಗಳ ಆಡಳಿತಾಧಿಕಾರಿ ಎಸ್.ಸವಿತಾ ಮತ್ತು ನಂಜಪ್ಪ ಟ್ರಸ್ಟ್‌ನ ಆಡಳಿತಾಧಿಕಾರಿ ಪಿ.ನಳಿನಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರು, ‘ಏಕರೂಪದ ವೇತನ ನಿಗದಿಪಡಿಸುವ ಪ್ರಸ್ತಾವ, ಕನಿಷ್ಠ ವೇತನ ಕಾಯ್ದೆ–1948ರ ಉದ್ದೇಶಕ್ಕೆ ವಿರುದ್ಧವಾಗಿದೆ. ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿರುವ ದರಗಳು ಹಿಂದಿನ ಹೆಚ್ಚಳಕ್ಕೆ ಹೋಲಿಕೆ ಮಾಡಿದರೆ ಶೇ 40ರಿಂದ ಶೇ 60ರಷ್ಟು ಅಧಿಕವಾಗಿವೆ. ಈ ದರಗಳು ದೇಶದಲ್ಲೇ ಅತ್ಯಧಿಕವಾಗಿವೆ’ ಎಂದರು.
‘ಕಾರ್ಮಿಕ ಇಲಾಖೆ 2025ರ ಏಪ್ರಿಲ್ 11 ಮತ್ತು 19ರಂದು ಹೊರಡಿಸಿರುವ ಉದ್ದೇಶಿತ ಕರಡು ಅಧಿಸೂಚನೆಗೆ ಪರಿಷ್ಕರಣೆಗೆ ಅರ್ಜಿದಾರರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ಪ್ರಸ್ತಾವನೆ ಕುರಿತಂತೆ ಚರ್ಚಿಸಲು ಸರ್ಕಾರ ಕೈಗಾರಿಕೆಗಳ ಜೊತೆ ಇನ್ನೂ ಸಭೆ ಕರೆದಿಲ್ಲ’ ಎಂದು ಆಕ್ಷೇಪಿಸಿದರು.
ಸರ್ಕಾರಿ ವಕೀಲರು, ‘ನಿರ್ದಿಷ್ಟವಾದ 80 ಉದ್ಯೋಗಗಳಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾವನೆ ಹೊಂದಿದ ಕರಡು ಅಧಿಸೂಚನೆಗಳ ಕುರಿತು ಸಂಬಂಧಿಸಿದ ಉದ್ಯಮ ಪ್ರತಿನಿಧಿಗಳ ಜೊತೆ ಸಮಗ್ರ ಚರ್ಚೆ ನಡೆಸಲಾಗುವುದು. ಅಲ್ಲಿಯವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಭರವಸೆ ನೀಡಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಒಂದು ವೇಳೆ ಸರ್ಕಾರ ಈ ಅರ್ಜಿ ವಿಚಾರಣೆಯ ಸಮಯದಲ್ಲಿ ಏನಾದರೂ ಅಧಿಸೂಚನೆಗಳನ್ನು ಜಾರಿಗೆ ತರಲು ಕೋರಿದ್ದೇ ಆದರೆ ಈ ದಿಸೆಯಲ್ಲಿ ಅರ್ಜಿದಾರರು ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ಸ್ವತಂತ್ರರಿದ್ದಾರೆ’ ಎಂದು ನ್ಯಾಯಪೀಠ ತಿಳಿಸಿತು.
ಪ್ರಕರಣದ ಪ್ರತಿವಾದಿಗಳಾದ ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಎಐಟಿಯುಸಿ (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್) ಮತ್ತು ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.