ADVERTISEMENT

ಮೃತ 1200 ಮಂದಿಗೆ ಪಿಂಡಪ್ರದಾನಕ್ಕೆ ಮುಂದಾದ ಸಚಿವ ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 18:55 IST
Last Updated 30 ಸೆಪ್ಟೆಂಬರ್ 2021, 18:55 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ 1,200 ಮಂದಿಯ ವಾರಸುದಾರರು ಪತ್ತೆಯಾಗದ ಕಾರಣ ಅವರಿಗೆ ಪಿತೃಪಕ್ಷದ ವೇಳೆ ವಿಷ್ಣು ಶ್ರಾದ್ಧ ಮಾಡಿ ಪಿಂಡಪ್ರದಾನ ಮಾಡಲು ಕಂದಾಯ ಸಚಿವ ಆರ್. ಅಶೋಕ ಮುಂದಾಗಿದ್ದಾರೆ.

ಕೋವಿಡ್‌ ಎರಡನೇ ಅಲೆಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಕೋವಿಡ್ ಭಯದಿಂದಾಗಿ ಮೃತರ ಕುಟುಂಬದವರೂ ಈ ಕೆಲಸ ಮಾಡಲು ಅಂಜುವ ವಾತಾವರಣ ಇತ್ತು. ಇಂತಹ 1200 ಜನರ ಅಂತ್ಯಕ್ರಿಯೆಯನ್ನು ವಿವಿಧ ಶವಾಗಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ನೆರವೇರಿಸಿದ್ದರು. ಶವಸಂಸ್ಕಾರವಾದ ಬಳಿಕ ಚಿತಾಭಸ್ಮವನ್ನೂ ಕೊಂಡೊಯ್ಯಲು ಯಾರೂ ಬಂದಿರಲಿಲ್ಲ.

ಇಂತಹ ಅನಾಥರ ಚಿತಾಭಸ್ಮ ಹಾಗೂ ಅಸ್ಥಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಕಾವೇರಿಯಲ್ಲಿ ವಿಸರ್ಜಿಸಿದ್ದ ಸಚಿವ ಅಶೋಕ, ಮೃತರ ಅಂತ್ಯೋತ್ತರ ಕ್ರಿಯೆಗಳನ್ನು ಸಾಮೂಹಿಕವಾಗಿ ನಡೆಸಿದ್ದರು. ಕೆಲ ತಿಂಗಳುಗಳ ಹಿಂದೆ ಅಸ್ಥಿ ವಿಸರ್ಜನೆ ಮಾಡಿರುವುದರಿಂದ ಸೋಮವಾರ (ಅ.4) ವಿಷ್ಣು ಶ್ರಾದ್ಧ ನಡೆಸಲು ಅಶೋಕ ತೀರ್ಮಾನಿಸಿದ್ದಾರೆ.

ADVERTISEMENT

ಪಿತೃಪಕ್ಷ ಹೊತ್ತಿನಲ್ಲಿ ಶ್ರಾದ್ಧ ನಡೆಸಲು ಅಶೋಕ ನಿರ್ಧರಿಸಿದ್ದಾರೆ. ಪಂಡಿತ ಭಾನುಪ್ರಕಾಶ ಶರ್ಮಾ ಅವರ ಸೂಚನೆಯ ಮೇರೆಗೆ ಅ.4ರಂದು ದಿನ ನಿಗದಿ ಮಾಡಲಾಗಿದೆ ಎಂದೂ ಮೂಲಗಳು ಹೇಳಿವೆ.

ಅನಾಥರ ಅಸ್ಥಿ ವಿಸರ್ಜನೆ ಹಾಗೂ ಧಾರ್ಮಿ ವಿಧಿ ನಡೆಸಿಕೊಟ್ಟಿದ್ದ ಅಶೋಕ ಅವರ ಕ್ರಮಕ್ಕೆ ಸಂಘ ಹಾಗೂ ಬಿಜೆಪಿ ಪ್ರಮುಖರು ಶ್ಲಾಘನೆ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ತಿಥಿ ಕಾರ್ಯ ಮಾಡಲು ಮುಂದಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.