ADVERTISEMENT

ಲಂಚ ಪಡೆದವರ ಹೆಸರು ಬಹಿರಂಗಪಡಿಸಿ: ಸಚಿವ ಸಿ.ಸಿ. ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:52 IST
Last Updated 26 ನವೆಂಬರ್ 2021, 16:52 IST
ಸಿ.ಸಿ.‍ಪಾಟೀಲ
ಸಿ.ಸಿ.‍ಪಾಟೀಲ   

ಬೆಂಗಳೂರು: ‘ಗುತ್ತಿಗೆದಾರರಿಂದ ಶೇಕಡ 40ರಷ್ಟು ಲಂಚ ಪಡೆದವರ ಹೆಸರನ್ನು ಗುತ್ತಿಗೆದಾರರ ಸಂಘದವರು ದಾಖಲೆ ಸಮೇತ ಬಹಿರಂಗಪಡಿಸಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಒತ್ತಾಯಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಗುತ್ತಿಗೆದಾರರ ಸಂಘದವರ ದೂರಿನಲ್ಲಿ ಖಚಿತವಾದ ವಿವರಗಳಿಲ್ಲ. ಶೇ 40ರಷ್ಟು ಲಂಚ ಕೊಡಲಾಗುತ್ತಿದೆ ಎಂಬ ದೂರನ್ನು ಯಾರು ಒಪ್ಪಲು ಸಾಧ್ಯ? ನಿಜವಾಗಿಯೂ ಹಣ ಕೊಟ್ಟಿದ್ದರೆ ಗುತ್ತಿಗೆದಾರರೇ ಬಹಿರಂಗಪಡಿಸಲಿ. ನಾನಾಗಲೀ, ಇತರ ಸಚಿವರಾಗಲೀ ಲಂಚ ಪಡೆದಿದ್ದರೆ ಹೇಳಲಿ’ ಎಂದು ಆಗ್ರಹಿಸಿದರು.

ಗುತ್ತಿಗೆದಾರರ ಸಂಘದ ದೂರಿನ ಹಿಂದೆ ಯಾವುದೋ ಷಡ್ಯಂತ್ರ ಇದ್ದಂತೆ ಕಾಣಿಸುತ್ತಿದೆ. ಆರೋಪಕ್ಕೆ ಯಾವ ಆಧಾರಗಳೂ ಇಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶೇ 10ರಷ್ಟು ಲಂಚ ಪಾವತಿಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಅದಕ್ಕೆ ಶೇ 30 ಸೇರಿಸಿ ಈಗ ಆರೋಪ ಮಾಡುತ್ತಿರುವ ಅನುಮಾನ ಇದೆ ಎಂದರು.

ADVERTISEMENT

‘ಆಧಾರರಹಿತ ಆರೋಪ ಮಾಡುವುದು ಕಾಂಗ್ರೆಸ್‌ ಪಕ್ಷದವರ ಗುಣ. ಗುತ್ತಿಗೆದಾರರ ಆರೋಪ ಕುರಿತು ತನಿಖೆಗೆ ಸಮಿತಿ ರಚಿಸಿದ್ದರೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಏನೇ ಮಾಡಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಪುನಃ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಹೇಳಿದರು.

ಮಳೆಯಿಂದ ರಾಜ್ಯದ ರಸ್ತೆಗಳಿಗೆ ಹಾನಿಯಾಗಿದೆ. ರಸ್ತೆಗಳ ದುರಸ್ತಿಗಾಗಿ ₹ 500 ಕೋಟಿ ಹೆಚ್ಚುವರಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.