ADVERTISEMENT

ನಕಲಿ ಅಂಕಪಟ್ಟಿ: ಅಧಿಕಾರಿಗಳ ಮೇಲೆ ಕ್ರಮ ಇಲ್ಲ

ವಿಧಾನ ಪರಿಷತ್‌ನಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಉತ್ತರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:13 IST
Last Updated 13 ಡಿಸೆಂಬರ್ 2021, 22:13 IST
   

ಬೆಳಗಾವಿ (ಸುವರ್ಣ ವಿಧಾನಸೌಧ): 'ಬೆಂಗಳೂರು ವಿಶ್ವವಿದ್ಯಾಲಯ ಯಾವುದೇ ನಕಲಿ ಅಂಕಪಟ್ಟಿ, ನಕಲಿ ಪದವಿ ಪ್ರದಾನ ಮಾಡಿಲ್ಲ. ಹೀಗಾಗಿ, ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ನಕಲಿ ಅಂಕಪಟ್ಟಿ ಪ್ರಕರಣ ಸಂಬಂಧ ಕ್ರಮಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ, ನಕಲಿ ಅಂಕಪಟ್ಟಿ ನೀಡಿ ಹುದ್ದೆ ಗಿಟ್ಟಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣಹೇಳಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ‘ನಕಲಿ ಅಂಕಪಟ್ಟಿ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಆದರೆ, ವಿಶ್ವವಿದ್ಯಾಲಯದಿಂದ ನಕಲಿ ಅಂಕ ಪಟ್ಟಿ ನೀಡಿದೆ ಎಂಬ ಕಾರಣಕ್ಕೆ ಅಲ್ಲ. ನೇಮಕಾತಿ ವೇಳೆ ಈ ವಿಶ್ವವಿದ್ಯಾಲಯದ ಹೆಸರಿನಲ್ಲಿ ಪಡೆದ ನಕಲಿ ಅಂಕ ಪಟ್ಟಿ ನೀಡಲಾಗಿದೆ ಎಂಬ ಕಾರಣಕ್ಕೆ ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯದ ಪರಿಶೀಲನೆಗೆ ಕಳುಹಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಪ್ರಕರಣ ಪತ್ತೆಯಾಗುತ್ತಿದ್ದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆ ಆಗದ ರೀತಿ ಎಚ್ಚರಿಕೆ ವಹಿಸಲು ಡಿಜಿ ಲಾಕರ್‌ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಆ ಮೂಲಕ, ಪ್ರತಿಯೊಬ್ಬ ವ್ಯಕ್ತಿಯ ದಾಖಲಾತಿ ಪರಿಶೀಲನೆ ಮಾಡಬಹುದಾಗಿದೆ’ ಎಂದರು.

ADVERTISEMENT

ಶಾಸಕ, ಸಚಿವರಿಂದಲೇ ನಕಲಿ ಅಂಕ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗದಿರುವುದಕ್ಕೆ ಕಿಡಿಕಾರಿದ ಬಿ.ಕೆ. ಹರಿಪ್ರಸಾದ್, ‘ಇದೊಂದು ಗಂಭೀರ ಸ್ವರೂಪದ ಪ್ರಕರಣ. ಶಾಸಕರು, ಸಚಿವರು, ಕೇಂದ್ರ ಸಚಿವರು ಕೂಡ ನಕಲಿ ಅಂಕಪಟ್ಟಿ ಪಡೆದಿದ್ದಾರೆ. ಬೇಕಾದರೆ ಹೆಸರುಗಳನ್ನೂ ಬಹಿರಂಗಪಡಿಸುತ್ತೇನೆ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘ಪಟ್ಟಿ ಇದ್ದರೆ ಹೇಳಬಹುದು’ ಎಂದು ಕಾಲೆಳೆದರು.

ಆಗ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ಸದನದ ಹೊರಗೆ ಇದ್ದ ನಕಲಿ ಅಂಕಪಟ್ಟಿ ವಿವಾದ ಈಗ ಸದನದ ಒಳಗೂ ಬಂದುಬಿಡ್ತಾ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ 10 ವರ್ಷದ ಗುರಿ: ‘ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ನ್ಯೂನತೆ ಸರಿಪಡಿಸುವ ಎಲ್ಲ ವ್ಯವಸ್ಥೆಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ. ಈ ನೀತಿಯ ಜಾರಿಗೆ 10 ವರ್ಷದ ಗುರಿಯೊಂದಿಗೆ ಅಗತ್ಯ ಅನುದಾನ ಒದಗಿಸಲಾಗುವುದು’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ನೀತಿ ಜಾರಿಯ ಮೂಲಕ ಪ್ರಾಥಮಿಕ ಶಾಲೆಗಳಲ್ಲಿ ಶೇ 100ರಷ್ಟು ದಾಖಲಾತಿ, ಕಲಿಕೆಯಲ್ಲಿ ಗುಣಮಟ್ಟ ತರಲಾಗುವುದು‘ಎಂದರು.

‘ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರ ಬದ್ಧ’
‘ರಾಜ್ಯದಲ್ಲಿರುವ ಎಲ್ಲ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌ ಪರ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪರಿಷತ್‌ನಲ್ಲಿ ಬಿಜೆಪಿಯ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿ ಅವರು, ‘ಸ್ಮಾರಕಗಳ ಸಂರಕ್ಷಿತ ಪ್ರದೇಶದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ಮುಂದಿನ ತಿಂಗಳಲ್ಲಿ ಸಭೆ ನಡೆಸಿ, ಸೀಮಿತ ಪ್ರದೇಶದ ಅಭಿವೃದ್ಧಿಗೆ ಅನುಮತಿ ಪಡೆದು ಕಾಮಗಾರಿ ಕೈಗೊಳ್ಳಲು ಯತ್ನಿಸಲಾಗುವುದು’ ಎಂದರು

ಹೆಲಿಕಾಪ್ಟರ್ ದುರಂತ: ತನಿಖೆಗೆ ಒತ್ತಾಯ
ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳಿದ್ದ ಹೆಲಿಕಾಪ್ಟರ್‌ ದುರಂತದ ಬಗ್ಗೆ ತನಿಖೆ ನಡೆಸುವಂತೆ ಉಭಯಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಸಂತಾಪ ಸೂಚನೆಯಡಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ’ಹೆಲಿಕಾಪ್ಟರ್ ದುರಂತದ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ರಾವತ್‌ ಸಾವನ್ನು ಸಂಭ್ರಮಿಸಿ ದ್ವೇಷದ ರಾಜಕಾರಣ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು‘ ಎಂದು ಒತ್ತಾಯಿಸಿದರು.

‘ಪ್ರಾರ್ಥನಾ ಮಂದಿರಗಳ ವಿದ್ಯುತ್ ಬಿಲ್ ಬಾಕಿ ಮನ್ನಾ ಇಲ್ಲ’
‘ರಾಜ್ಯದಲ್ಲಿರುವ ಯಾವುದೇ ಧರ್ಮದ, ಯಾವುದೇ ಪ್ರಾರ್ಥನಾ ಮಂದಿರದ ವಿದ್ಯುತ್ ಬಿಲ್‌ ಬಾಕಿ ಮನ್ನಾ ಮಾಡುವುದಿಲ್ಲ’ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು. ವಿಧಾನಪರಿಷತ್‌ನಲ್ಲಿ ಬಿಜೆಪಿಯ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಧರ್ಮಗಳ ಹಲವು ಪ್ರಾರ್ಥನಾ ಮಂದಿರಗಳ ವಿದ್ಯುತ್ ಬಾಕಿ ಇದೆ. ಆದರೆ, ಬಾಕಿ ಬಿಲ್ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಆದರೆ, ಯಾವುದೇ ಪ್ರಾರ್ಥನಾ ಮಂದಿರ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೆ ಕಡಿತ ಮಾಡಲಾಗುವುದು’ ಎಂದು ಭರವಸೆ ನೀಡಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.