ADVERTISEMENT

ಪ್ರಶಸ್ತಿ ಮೊತ್ತ: ಮಧ್ಯಮ ಮಾರ್ಗದ ಆಯ್ಕೆ: ಸಚಿವ ಸಿ.ಟಿ.ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 18:54 IST
Last Updated 23 ಅಕ್ಟೋಬರ್ 2019, 18:54 IST
ಸಿ ಟಿ ರವಿ
ಸಿ ಟಿ ರವಿ   

ಧಾರವಾಡ: ‘ರಾಜ್ಯದ ವಿವಿಧ ಟ್ರಸ್ಟ್‌ಗಳ ಮೂಲಕ ನೀಡಲಾಗುವ ಪ್ರಶಸ್ತಿಗಳ ಮೊತ್ತ ಆಗಾಗ ಬದಲಾಗುತ್ತಿರುವ ಕುರಿತು ಸಾಕಷ್ಟು ಆಕ್ಷೇಪ ವ್ಯಕ್ತವಾಗಿದ್ದು, ಈ ವಿಷಯದಲ್ಲಿ ಮಧ್ಯಮ ಮಾರ್ಗ ಆಯ್ದುಕೊಳ್ಳುವತ್ತ ಚಿಂತನೆ ನಡೆದಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವ್ಯಕ್ತಿಗಳ ಹೆಸರಿನಲ್ಲಿ ನೀಡುವ ಪ್ರಶಸ್ತಿಯಲ್ಲಿ ವ್ಯಕ್ತಿ ಮುಖ್ಯವಾಗಬೇಕೇ ಹೊರತು, ನಗದು ಪುರಸ್ಕಾರವಲ್ಲ. ಹಿಂದಿನ ಸರ್ಕಾರಗಳು ಇದರಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿವೆ. ಈ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಪಾಲಕರ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಸೇರಿದಂತೆ ದೇಶದ ಭಾಷೆಗಳೂ ಅಪಾಯಕ್ಕೆ ಸಿಲುಕಿವೆ. ಇಂಥ ಸಂದರ್ಭದಲ್ಲಿ ಎಲ್ಲಾ ಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನವನ್ನು ಇಂಗ್ಲಿಷ್‌ನಲ್ಲಿ ಮತ್ತು ಇತಿಹಾಸ ಮತ್ತು ಸಮಾಜ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವ ಸಲಹೆಯನ್ನು ಶಾಸಕ ಅರವಿಂದ ಬೆಲ್ಲದ ನೀಡಿದ್ದಾರೆ. ಇದನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

ಸಾಮರ್ಥ್ಯ ಹೆಚ್ಚಿಸಿಕೊಂಡರೆ ಉದ್ಯೋಗ: ‘ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಬಯಸಿದಲ್ಲಿ ನಾವು ಅವಕಾಶಕ್ಕಿಂತ ಭದ್ರತೆಯನ್ನು ನೆಚ್ಚಿಕೊಂಡಂತಾಗಲಿದೆ. ಇದರ ಬದಲಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಲ್ಲಿ ಕರ್ನಾಟಕ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಕನ್ನಡಿಗರು ಉದ್ಯೋಗಾವಕಾಶ ಪಡೆಯುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.