ADVERTISEMENT

ಡ್ರಗ್‌  ಮಾಫಿಯಾ | ಒತ್ತಡ ತಂತ್ರಕ್ಕೆ ಸರ್ಕಾರ ಬಗ್ಗಲ್ಲ ಎಂದ ಸಚಿವ ಸಿ.ಟಿ.ರವಿ

ದಸರಾ: 8ರಂದು ಉನ್ನತಮಟ್ಟದ ಸಮಿತಿ ಸಭೆ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 9:27 IST
Last Updated 4 ಸೆಪ್ಟೆಂಬರ್ 2020, 9:27 IST
ಸಚಿವ ಸಿ.ಟಿ.ರವಿ
ಸಚಿವ ಸಿ.ಟಿ.ರವಿ   

ಚಿಕ್ಕಮಗಳೂರು: ‘ಸರ್ಕಾರವು ಡ್ರಗ್‌ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿದೆ. ತನಿಖಾ ತಂಡದ ಮೇಲೆ ಒತ್ತಡ ಹೇರುವ, ವಿಷಯಾಂತರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಅದಕ್ಕೆ ಸರ್ಕಾರ ಬಗ್ಗಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮಾಫಿಯಾಕ್ಕೆ ಹೊರ ರಾಜ್ಯ, ವಿದೇಶಗಳ ನಂಟು ಇದೆ. ಕೆಲವೆಡೆ ಭಯೋತ್ಪಾದಕರು, ರಾಜಕಾರಣಿಗಳು, ಸಿನಿಮಾ ನಟರಲ್ಲಿ ತಳಕು ಹಾಕಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಯುವಜನರನ್ನು ಪಿಡುಗಿನಿಂದ ಮುಕ್ತಗೊಳಿಸಲು ಜವಾಬ್ದಾರಿ ಸರ್ಕಾರದ ಮೇಲಿದೆ. ಗಂಭೀರವಾಗಿ ತನಿಖೆ ಮಾಡಿಸುತ್ತಿದ್ದೇವೆ’ ಎಂದು ಉತ್ತರಿಸಿದರು.

‘ದಸರಾಕ್ಕೆ ಸಂಬಂಧಿಸಿದಂತೆ ಇದೇ 8ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಡೆಯಲಿದೆ. ದಸರಾ ರೂಪರೇಷೆ ಕುರಿತು ಚರ್ಚಿಸಲಾಗುವುದು. ನಂತರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌ ಅವರ ಜತೆಗೂಡಿ ಸಮಗ್ರ ಯೋಜನೆ ರೂಪಿಸಲಾಗುವುದು ’ ಎಂದರು.

ADVERTISEMENT

‘ಸಂಪ್ರದಾಯ ಪಾಲಿಸಿ, ಸರಳವಾಗಿ ದಸರಾ ಆಚರಿಸಬೇಕು ಎಂದು ಈಗ ಚರ್ಚಿಸಲಾಗಿದೆ. ಉನ್ನತಮಟ್ಟದ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.