ADVERTISEMENT

ಕಾರ್ಮಿಕರ ಹಣ ಬಳಸಿದರೆ ಶಿಸ್ತು ಕ್ರಮ

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 14:06 IST
Last Updated 6 ಏಪ್ರಿಲ್ 2020, 14:06 IST
ಶಿರಸಿಯ ಕೋಟೆಕೆರೆ ಮುಂಭಾಗದಲ್ಲಿ ಬೀಡುಬಿಟ್ಟಿರುವ ಸರ್ಕಲ್ ಕಂಪನಿಯ ಕಾರ್ಮಿಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ ಅವರು ಹಾಲಿನ ಪ್ಯಾಕೆಟ್ ವಿತರಿಸಿದರು
ಶಿರಸಿಯ ಕೋಟೆಕೆರೆ ಮುಂಭಾಗದಲ್ಲಿ ಬೀಡುಬಿಟ್ಟಿರುವ ಸರ್ಕಲ್ ಕಂಪನಿಯ ಕಾರ್ಮಿಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ ಅವರು ಹಾಲಿನ ಪ್ಯಾಕೆಟ್ ವಿತರಿಸಿದರು   

ಶಿರಸಿ: ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ನೆರವಾಗಲು ಅವರ ಖಾತೆಗೆ ಸರ್ಕಾರ ಹಾಕಿರುವ ಹಣವನ್ನು ಸಾಲಕ್ಕೆ ವಜಾ ಮಾಡಿದರೆ, ಅಂತಹ ಬ್ಯಾಂಕ್‌ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಬೀಡುಬಿಟ್ಟಿರುವ ಸರ್ಕಲ್ ಕಂಪನಿಯ ಕಾರ್ಮಿಕರಿಗೆ ಸೋಮವಾರ ಕೆಎಂಎಫ್ ನೀಡಿದ ಉಚಿತ ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ‘ಕೊರೊನಾ ವೈರಸ್ ನಿಯಂತ್ರಿಸಲು ಲಾಕ್‌ಡೌನ್ ಜಾರಿಯಲ್ಲಿದೆ. ಕೆಲಸವಿಲ್ಲದೇ ಕಾರ್ಮಿಕರು ಕಂಗೆಡಬಾರದೆಂದು ಅವರ ಖಾತೆಗೆ ಸರ್ಕಾರವೇ ಮುಂದಾಗಿ ಹಣ ನೀಡಿದೆ. ಕೋವಿಡ್‌–19 ನಿಯಂತ್ರಣಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪಿಂಚಣಿ ಯೋಜನೆಯಡಿ ಮುಂಬರುವ ಎರಡು ತಿಂಗಳ ಪಿಂಚಣಿ ನೀಡುವಂತೆ ಸೂಚಿಸಲಾಗಿದೆ. ಎರಡು ತಿಂಗಳುಗಳ ರೇಷನ್ ನೀಡಲಾಗುತ್ತಿದೆ’ ಎಂದರು.

60ಸಾವಿರಕ್ಕಿಂತ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ನಿತ್ಯ ಊಟ ನೀಡಲಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ ತಲಾ ₹ 2000ದಂತೆ ₹ 460 ಕೋಟಿ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ನೇರವಾಗಿ ಸ್ಪಂದಿಸಲು ಸಾಧ್ಯವಾಗದ ಕಾರಣ, ಏಪ್ರಿಲ್ 7ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಸೇರಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ADVERTISEMENT

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಡಿವೈಎಸ್ಪಿ ಜಿ.ಟಿ.ನಾಯಕ, ಪೌರಾಯುಕ್ತ ರಮೇಶ ನಾಯಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.