ದಾವಣಗೆರೆ: ‘ಸಹಕಾರ ಬ್ಯಾಂಕ್‌ಗಳ ಮೂಲಕ33 ಲಕ್ಷ ರೈತರಿಗೆ ಸಾಲಸೌಲಭ್ಯ ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ. ಕನಿಷ್ಠ 3 ಲಕ್ಷ ಹೊಸ ರೈತರಿಗೆ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸರ್ಕಾರಿ ಸವಲತ್ತುಗಳು ಪಡೆದವರಿಗೇ ಮತ್ತೆ ಸಿಗುತ್ತಿರುವ ದೂರುಗಳಿವೆ. ಈ ಬಾರಿ ಯಾವುದೇ ಸೌಲಭ್ಯ ಪಡೆಯದವರನ್ನು ಹೊಸ ರೈತರು ಎಂದು ಪರಿಗಣಿಸಲಾಗುವುದು’ ಎಂದರು.
‘ಕೃಷಿಕರಿಗೆ ವಿವಿಧ ಯೋಜನೆಗಳಡಿ ನೆರವು ಒದಗಿಸಲು ಬಜೆಟ್‌ನಲ್ಲಿ ₹ 24,000 ಕೋಟಿ ಅನುದಾನ ಇರಿಸಲಾಗಿದೆ. ಸಹಕಾರ ಸಂಘಗಳ ಮೂಲಕ ಸಾಲ ಮಂಜೂರು ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ’ ಎಂದರು.
ಸಾಲದ ಮೊತ್ತ ದುಪ್ಪಟ್ಟು ಚಿಂತನೆ
‘ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುತ್ತಿರುವ ಶೂನ್ಯ ಬಡ್ಡಿ ದರದ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಮೊತ್ತವನ್ನು ದುಪ್ಪಟ್ಟು ಮಾಡುವ ಚಿಂತನೆಯೂ ಇದೆ’ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಬಾರ್ಡ್ ಜೊತೆಗೆ ಚರ್ಚಿಸಿದ್ದಾರೆ. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳ ಬದಲಿಗೆ ಸಹಕಾರ ಬ್ಯಾಂಕ್‌ಗಳಲ್ಲಿಯೇ ಸಾಲ ಪಡೆಯಬೇಕು ಎಂಬುದು ಇದರ ಉದ್ದೇಶ ಎಂದರು.
‘ಸಹಕಾರ ಬ್ಯಾಂಕ್‌ಗಳಲ್ಲಿ ಅವ್ಯವಹಾರದ ಆರೋಪಗಳು ಕೇಳಿಬರುತ್ತಿವೆ. ಇದನ್ನು ತಡೆಯಲು ಸಹಕಾರ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.