ADVERTISEMENT

ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 10:36 IST
Last Updated 25 ಜನವರಿ 2022, 10:36 IST
   

ಬೆಂಗಳೂರು: ‘ಉಸ್ತುವಾರಿ ಹಂಚಿಕೆಗೂ ಮೊದಲು ನಾನು ಎಲ್ಲ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರಿಗೂ ಅಸಮಾಧಾನ ಇಲ್ಲ. ಆ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು ‘ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡುವ ಮೊದಲು ಮತ್ತು ನಂತರ ಎಲ್ಲರ ಜೊತೆಗೂ ಮಾತನಾಡಿದ್ದೇನೆ. ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಉಸ್ತುವಾರಿ ನೀಡಬೇಕು ಎನ್ನುವಂಥದ್ದು ನಮ್ಮ ಪಕ್ಷದ ರಾಷ್ಟ್ರೀಯ ನೀತಿ. ಇದರ ಬಗ್ಗೆ ಸುದೀರ್ಘವಾಗಿ ಸಚಿವರ ಕೊತೆ ಚರ್ಚೆ ಮಾಡಿದ್ದೇನೆ’ ಎಂದರು.

‘ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಒಂದಾಗಿದ್ದೇವೆ. ಸರ್ಕಾರವನ್ನು ಅತ್ಯಂತ ಸೂಕ್ತವಾಗಿ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇನೆ. ಅಸಮಾಧಾನ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಕಾಂಗ್ರೆಸ್ಸಿಗರಿಗೆ ಅಭದ್ರತೆ ಕಾಡುತ್ತಿದೆ ಎನ್ನುವುದು ಅವರಿಬ್ಬರ ಹೇಳಿಕೆಗಳಿಗಿಂತ ಗೊತ್ತಾಗುತ್ತಿದೆ. ಅದರ ಪ‍ರಿಣಾಮ ಇಬ್ಬರೂ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಿಜೆಪಿಯಿಂದ ಯಾರೂ ಹೋಗುವ ಪ್ರಶ್ನೆಯೇ ಇಲ್ಲ’ ಎಂದರು.

‘ರಾಜಕೀಯ ಬೆಳವಣಿಗೆಳ ಬಗ್ಗೆ ವ್ಯಾಖ್ಯಾನಗಳನ್ನು ನಾನು ಈಗ ಮಾಡುವುದಿಲ್ಲ. ಆದರೆ, ಕೆಲವೇ ದಿನ ಕಾಯಿರಿ. ಬಿಜೆಪಿ ಪರವಾಗಿ ಯಾವ ರೀತಿ ಬಲವರ್ಧನೆ ಆಗುತ್ತದೆ ಎಂದು ನೀವೇ ನೋಡಿ‘ ಎಂದರು.

ಜೈಲು ಡಿಜಿ ಜೊತೆ ಮಾತನಾಡುತ್ತೇನೆ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿ ಆಗಿರುವ ಜೆಸಿಬಿ ನಾರಾಯಣ ಹಣ ಕೊಟ್ಟು ಸೌಲಭ್ಯ ಪಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅಲ್ಲಿ ಏನು ನಡೆಯುತ್ತಿದೆ ಎನ್ನುವುದರ ವಾಸ್ತವಿಕ ವರದಿ ತರಿಸಿಕೊಳ್ಳುತ್ತೇನೆ. ಜೈಲು ಡಿಜಿ ಅವರನ್ನು ಕರೆಸಿ ಮಾತನಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.