ADVERTISEMENT

ಮುಷ್ಕರ ಹಿಂಪಡೆದ ತೀರ್ಮಾನಕ್ಕೆ ಸಚಿವಾಲಯ ನೌಕರರ ಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 10:00 IST
Last Updated 1 ಮಾರ್ಚ್ 2023, 10:00 IST
   

ಬೆಂಗಳೂರು: ಶೇಕಡ 17ರಷ್ಟು ಮಧ್ಯಂತರ ಪರಿಹಾರ ಹಾಗೂ ಹಳೆಯ ಪಿಂಚಣಿ ಪದ್ಧತಿ ಮರು ಜಾರಿ ಕುರಿತು ಪರಿಶೀಲಿಸುವ ಭರವಸೆ ಆಧರಿಸಿ ಸರ್ಕಾರಿ ನೌಕರರ ಮುಷ್ಕರ ಕೈಬಿಟ್ಟಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನಿರ್ಧಾರವನ್ನು ಸಚಿವಾಲಯ ನೌಕರರ ಸಂಘ ವಿರೋಧಿಸಿದೆ.

ಈ‌ ಕುರಿತು ಹೇಳಿಕೆ ನೀಡಿರುವ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.‌ಗುರುಸ್ವಾಮಿ, 'ಷಡಾಕ್ಷರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರ ಕೈಗೊಂಡಿರುವ ತೀರ್ಮಾನಗಳಿಂದ ನೌಕರರಿಗೆ ಯಾವುದೇ ರೀತಿಯಲ್ಲೂ ಅನುಕೂಲ ಆಗುವುದಿಲ್ಲ. ಸರ್ಕಾರ ನೌಕರರಿಗೆ ಮೋಸ‌ ಮಾಡಿದೆ. ಮುಷ್ಕರ ಕೈಬಿಡಲು ಏಕಪಕ್ಷೀಯವಾಗಿ ನಿರ್ಧರಿಸಿರುವ ಷಡಾಕ್ಷರಿ ಅವರ ನಡೆಯನ್ನು ಖಂಡಿಸುತ್ತೇವೆ' ಎಂದಿದ್ದಾರೆ.

2022ರ‌ ಜುಲೈ ತಿಂಗಳಿನಿಂದಲೇ ಏಳನೇ ವೇತನ ಆಯೋಗದ ಸೌಲಭ್ಯಗಳು ನೌಕರರಿಗೆ ದೊರೆಯಬೇಕಿತ್ತು. ಆದರೆ, ಮಧ್ಯಂತರ ಪರಿಹಾರವನ್ನು ಮುಂದಿನ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಘೋಷಿಸಲಾಗಿದೆ. ಕನಿಷ್ಠ ಶೇಕಡ 25ರಷ್ಟಾದರೂ ಮಧ್ಯಂತರ ಪರಿಹಾರ ನೀಡಬೇಕಿತ್ತು. ಆದರೆ, ಶೇ 17ರಷ್ಟು ಮಾತ್ರ ಹೆಚ್ಚಳದಿಂದ ನೌಕರರಿಗೆ ಅನ್ಯಾಯವಾಗಲಿದೆ. ಒಪಿಎಸ್ ಜಾರಿ ಕುರಿತು ಹಿಂದೆಯೇ ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಈಗ ಪುನಃ ಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ ಎಂದು ಟೀಕಿಸಿದ್ದಾರೆ.

ADVERTISEMENT

ಷಡಾಕ್ಷರಿ ಅವರು ಮುಷ್ಕರಕ್ಕೆ ಕರೆ ನೀಡುವ ಮುನ್ನ ಎಲ್ಲ ಸಂಘಟನೆಗಳ ಜತೆ ಚರ್ಚಿಸಿದ್ದರು. ಈಗ ಯಾರೊಂದಿಗೂ ಚರ್ಚಿಸದೇ ಮುಷ್ಕರ ಕೈಬಿಟ್ಟಿದ್ದಾರೆ‌. ಇದು ಖಂಡನೀಯ ಎಂದಿದ್ದಾರೆ.

ಸಚಿವಾಲಯದ ಆಪ್ತ ಸಹಾಯಕರು ಮತ್ತು ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ಎಸ್. ಪಂಡಿತ್ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.