
ಹೈಕೋರ್ಟ್
ಬೆಂಗಳೂರು: ‘ಕೌಟುಂಬಿಕ ವ್ಯಾಜ್ಯ ಎದುರಿಸುತ್ತಿರುವ ಪತಿ-ಪತ್ನಿಯರಲ್ಲಿ ಯಾರಾದರೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿಗೆ ಪಾಸ್‌ಪೋರ್ಟ್ ನೀಡುವಂತೆ ಅರ್ಜಿ ಸಲ್ಲಿಸಿದಾಗ, ಮಗುವಿನ ಸುಪರ್ದಿಯ ಬಗ್ಗೆ ಸುಳ್ಳು ಘೋಷಣೆಗಳನ್ನು ಮಾಡಿದ್ದರೆ ಅಂತಹ ಮನವಿಗಳನ್ನು ಮಾನ್ಯ ಮಾಡಲಾಗದು’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
‘ತಮ್ಮ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಹೊಸ ಪಾಸ್‌ಪೋರ್ಟ್ ನೀಡಲು ಮತ್ತು ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ನವೀಕರಣಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಪೋಷಕರು ಪಾಸ್‌ಪೋರ್ಟ್‌ಗಳಲ್ಲಿ ವಾಸ್ತವಾಂಶಗಳನ್ನು ಸರಿಯಾಗಿ ಘೋಷಿಸಬೇಕು. ಒಂದು ವೇಳೆ ವಿಚ್ಛೇದನ ಪಡೆದಿದ್ದರೆ ಮತ್ತು ಮಗುವಿನ ಸುಪರ್ದಿಯ ಕುರಿತಾದ ಆದೇಶಗಳಿದ್ದರೆ ಅಂತಹ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.
ವಿಚಾರಣೆ ವೇಳೆ, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್, ‘ಪೋಷಕರು ಪಾಸ್‌ಪೋರ್ಟ್ ನೀಡುವಂತೆ ಅರ್ಜಿ ಸಲ್ಲಿಸಿದಾಗ, ಕಾನೂನು ಬದ್ಧ ಪೋಷಕರು ಎಂದು ಹೇಳಿಕೊಳ್ಳುವ ಸೂಕ್ತ ಘೋಷಣೆ ಮಾಡಬೇಕು. ವಿಚ್ಛೇದನವನ್ನು ನೀಡಿದ್ದರೆ ಮತ್ತು ಮಗುವನ್ನು ಯಾರ ಕಸ್ಟಡಿಗೆ ನೀಡಲಾಗಿದೆ ಎಂಬುದರ ನಿರ್ದಿಷ್ಟತೆಯನ್ನು ನಮೂದಿಸಿರಬೇಕು ಮತ್ತು ಆ ವ್ಯಕ್ತಿಯೇ ಮಗುವಿನ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ವಿಚ್ಛೇದನ ಪ್ರಕ್ರಿಯೆಗಳು ಬಾಕಿ ಇದ್ದರೆ ಮತ್ತು ಮದುವೆ ಇನ್ನೂ ಮುಂದುವರಿದಿದ್ದರೆ, ಇತರ ಸಂಗಾತಿಯ ಒಪ್ಪಿಗೆಯನ್ನು ಲಗತ್ತಿಸದಿರಲು ಕಾರಣಗಳೇನು ಎಂಬುದನ್ನು ಪಾಸ್‌ಪೋರ್ಟ್ ಅರ್ಜಿಯೊಂದಿಗೆ ಸೇರ್ಪಡೆ ಮಾಡಿರಬೇಕು’ ಎಂದು ಪ್ರತಿಪಾದಿಸಿದ್ದರು.
ಈ ವಾದಾಂಶವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಪಾಸ್‌ಪೋರ್ಟ್‌ಗಳ ಮರು ವಿತರಣೆಗೆ ಸಂಬಂಧಿಸಿದಂತೆ ತಂದೆ–ತಾಯಿ ಇಬ್ಬರೂ ಸಹಿ ಮಾಡಿದ ಅನುಬಂಧ-ಡಿ ಅನುಸಾರದ ಘೋಷಣೆಯನ್ನು ಸಲ್ಲಿಸಿದ ಹತ್ತು ದಿನಗಳಲ್ಲಿ ಅಗತ್ಯ ಆದೇಶ ಹೊರಡಿಸಿ’ ಎಂದು ಪಾಸ್‌ಪೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಮಕ್ಕಳು ಅಪ್ರಾಪ್ತ ವಯಸ್ಸಿನವರಾದ ಕಾರಣ, ಇಬ್ಬರೂ ಪೋಷಕರಿಂದ ಅಗತ್ಯವಿರುವ ಒಪ್ಪಂದವನ್ನು ಲಗತ್ತಿಸಿರಲಿಲ್ಲ. ಈ ಕಾರಣಕ್ಕಾಗಿ ಅವರ ಅರ್ಜಿಗಳನ್ನು ಪರಿಗಣಿಸಲಾಗಿರಲಿಲ್ಲ. ಹಾಗಾಗಿ, ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.