ಬೆಂಗಳೂರು: ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂರು ದಿನಗಳಿಂದ ಬೆಂಗಳೂರು ಮತ್ತು ಮೈಸೂರು ವಿಭಾಗದ 40 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬುಧವಾರ ದೆಹಲಿಗೆ ವಾಪಾಸಾದರು. ಬೆಳಗಾವಿ ವಿಭಾಗದ ಪಕ್ಷದ ಶಾಸಕರಿಂದ ಅಭಿಪ್ರಾಯ ಪಡೆಯಲು ಇದೇ 7ರಂದು ಮತ್ತೆ ರಾಜ್ಯಕ್ಕೆ ಬರಲಿದ್ದಾರೆ.
ಶಾಸಕರ ಭೇಟಿಗೆ ನಿಗದಿಪಡಿಸಿದ್ದ ವೇಳಾಪಟ್ಟಿಯ ಪ್ರಕಾರ 42 ಶಾಸಕರ ಜೊತೆ ಸುರ್ಜೇವಾಲಾ ಅವರ ಚರ್ಚೆ ನಡೆಸಬೇಕಿತ್ತು. ಆದರೆ, ಪಿ.ಎಂ. ನರೇಂದ್ರಸ್ವಾಮಿ ಮತ್ತು ಕಾಂಗ್ರೆಸ್ ಸಹ ಸದಸ್ಯರಾಗಿರುವ ಸರ್ವೋದಯ ಪಕ್ಷದ ದರ್ಶನ್ ಪುಟ್ಣಣ್ಣಯ್ಯ ಅವರು ವಿದೇಶ ಪ್ರವೇಶದಲ್ಲಿರುವುದರಿಂದ ಭೇಟಿ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶಾಸಕರಾದ ಗಣೇಶ್ ಹುಕ್ಕೇರಿ, ನಯನಾ ಮೋಟಮ್ಮ, ಕೆ.ಎಂ. ಶಿವಲಿಂಗೇಗೌಡ, ಜಿ.ಎಚ್. ಶ್ರೀನಿವಾಸ್, ಕೆ.ಎಸ್. ಆನಂದ್, ಎ.ಎಸ್. ಪೊನ್ನಣ್ಣ, ಕದಲೂರು ಉದಯ್ ಮುಂತಾದವರ ಜೊತೆ ಸುರ್ಜೇವಾಲಾ ಅವರು ಬುಧವಾರ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.
‘ನನ್ನ ಕ್ಷೇತ್ರಕ್ಕೆ ಅನುದಾನದ ಸಮಸ್ಯೆ ಸ್ವಲ್ಪ ಇದೆ. ಗ್ಯಾರಂಟಿಗಳ ಅನುಷ್ಠಾನ ಚೆನ್ನಾಗಿಯೇ ಆಗಿದೆ’ ಎಂದು ಅಭಿಪ್ರಾಯ ಹಂಚಿಕೊಂಡ ಶಿವಲಿಂಗೇಗೌಡ, ಶಾಸಕರ ಗೊಂದಲದ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
‘ಮುಖ್ಯಮಂತ್ರಿ ಬದಲಾವಣೆ ವಿಚಾರ ಪದೇ ಪದೇ ಚರ್ಚೆಯಾಗುತ್ತಿದೆ. ಇದು ಸರ್ಕಾರಕ್ಕೆ ಒಳ್ಳೆಯದಲ್ಲ. ಸಿದ್ದರಾಮಯ್ಯ ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದು, ಎಲ್ಲ ಶಾಸಕರು ಅವರ ಪರ ಇದ್ದಾರೆ. ಅವರಿಲ್ಲದೆ ಸರ್ಕಾರ ಸುಭದ್ರವಾಗಿ ನಡೆಯುವುದು ಕಷ್ಟ. ಅವರನ್ನೇ ಮುಂದುವರಿಸಬೇಕು’ ಎಂದೂ ಅವರು ಹೇಳಿದ್ದಾರೆ ಎಂದೂ ಗೊತ್ತಾಗಿದೆ.
ಸುರ್ಜೇವಾಲಾ ಭೇಟಿಯ ಬಳಿಕ ಮಾತನಾಡಿದ ಪೊನ್ನಣ್ಣ, ‘ಕ್ಷೇತ್ರದ ಅಭಿವೃದ್ಧಿ ಕೆಲಸ, ಪಕ್ಷ ಸಂಘಟನೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅದು ಬಿಟ್ಟು ಬೇರೆ ಏನೂ ಚರ್ಚೆ ಆಗಿಲ್ಲ. ಅನುದಾನ ವಿಚಾರದ ಬಗ್ಗೆ ಯಾವ ಅಸಮಾಧಾನವೂ ಇಲ್ಲ. ಮಾನವ– ಪ್ರಾಣಿ ಸಂಘರ್ಷಕ್ಕೆ ವಿಶೇಷ ಕಾರ್ಯಕ್ರಮ ರೂಪಿಸುವಂತೆ ಸುರ್ಜೇವಾಲಾ ಅವರ ಬಳಿ ಮನವಿ ಮಾಡಿದ್ದೇನೆ. ನನ್ನ ಕಾರ್ಯವೈಖರಿ, ಪಕ್ಷ ಸಂಘಟನೆ ಬಗ್ಗೆ ನನಗೆ ತೃಪ್ತಿಯಿದೆ’ ಎಂದರು.
‘ನನ್ನ ಕ್ಷೇತ್ರದಲ್ಲಿ ಕೆಲವು ಇಲಾಖೆಗಳ ಮೂಲಕ ಏನು ಕೆಲಸ ಆಗಬೇಕೆಂಬ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಆ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ಕದಲೂರು ಉದಯ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.