ADVERTISEMENT

ಸಾಂಪ್ರದಾಯಿಕ ‌ಮತಗಳು ಬರಲಿಲ್ಲವೇಕೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ: ರವಿಶಂಕರ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 7:09 IST
Last Updated 16 ಜೂನ್ 2022, 7:09 IST
 ಮೈ.ವಿ. ರವಿಶಂಕರ್
ಮೈ.ವಿ. ರವಿಶಂಕರ್    

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ‌ಬಿಜೆಪಿಯ ಸಾಂಪ್ರದಾಯಿಕ ಮತಗಳು ಬರಲಿಲ್ಲವೇಕೆ ಎನ್ನುವುದು ಯಕ್ಷಪ್ರಶ್ನೆಯಾಗಿ ನನ್ನನ್ನು ಕಾಡುತ್ತಿದ್ದು, ಬಹಳ ಘಾಸಿಗೊಂಡಿದ್ದೇನೆ ಎಂದು ಪರಾಜಿತ ಅಭ್ಯರ್ಥಿ ಬಿಜೆಪಿಯ ಮೈ.ವಿ. ರವಿಶಂಕರ್ ಹೇಳಿದರು.

ಮತ ಎಣಿಕೆ ನಂತರ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ವಿಜೇತ ಕಾಂಗ್ರೆಸ್‌ನ ಮಧು ಮಾದೇಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.‌ ಮತದಾರರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡಿದರು. ನನಗೆ ಬರಬೇಕಾಗಿದ್ದ ಮತ ಹಾಗೂ ಜೆಡಿಎಸ್‌ನಲ್ಲಾದ ವ್ಯತ್ಯಾಸದಿಂದ ಸೋತೆ ಎಂದರು.

ಜೆಡಿಎಸ್‌ನವರ ಚದುರಂಗದ ಆಟದಲ್ಲಿ ನಾನು ಸೋತಿದ್ದೇನೆ. ಅವರ ಸಾಂಪ್ರದಾಯಿಕ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಪಡೆದಿದ್ದಿದ್ದರೆ ನನಗೆ ಅನುಕೂಲ ಆಗುತ್ತಿತ್ತು. ಆದರೆ ಮತದಾನಕ್ಕೆ ಎರಡು‌ ದಿನ ಇರುವಾಗ ಜೆಡಿಎಸ್‌ನವರು ಪಲಾಯನ ಮಾಡಿದರೆಂದು ನನಗನಿಸುತ್ತದೆ. ಕಾಂಗ್ರೆಸ್ ಹೇಗೆ ಇಷ್ಟು ಮತಗಳನ್ನು ಪಡೆಯಿತು ಎನ್ನುವುದು ನನಗೂ ಅಚ್ಚರಿ ತರಿಸಿದೆ ಎಂದು ಹೇಳಿದರು.

ADVERTISEMENT

ಮೈಸೂರು ನಗರದಲ್ಲೂ ನನಗೆ ನಿರೀಕ್ಷಿತ ಮತಗಳು‌ ಬರಲಿಲ್ಲ. ಬರಲಿಲ್ಲವೇಕೆ ಎನ್ನುವುದು ನನಗೂ ಯಕ್ಷ ಪ್ರಶ್ನೆಯಾಗಿದೆ. ಪಕ್ಷದ ಹಿರಿಯ ನಾಯಕರು ಇದನ್ನು ಯೋಚಿಸಬೇಕು. ಕಾರ್ಯಕರ್ತರು ಕೆಲಸ ಮಾಡಿದ್ದರಿಂದಾಗಿ ನನಗೆ ಮೊದಲ ಪ್ರಾಶಸ್ತ್ಯದ ಮತಗಳು ದೊರೆತಿವೆ. ಚುನಾವಣೆಯಲ್ಲಿ ನಿಲ್ಲುವ ಮೊದಲು ಎರಡೆರಡು ಬಾರಿ ಯೋಚಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.