ADVERTISEMENT

ನ್ಯಾಷನಲ್‌ ಹೆರಾಲ್ಡ್‌ಗೆ ಡಿ.ಕೆ. ಶಿವಕುಮಾರ್ ₹ 25 ಲಕ್ಷ ದೇಣಿಗೆ: ಇ.ಡಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 20:28 IST
Last Updated 23 ಮೇ 2025, 20:28 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೈಯಕ್ತಿಕವಾಗಿ ₹25 ಲಕ್ಷ ದೇಣಿಗೆ ನೀಡಿದ್ದಾರೆ ಹಾಗೂ ಅವರ ಟ್ರಸ್ಟ್‌ ಮೂಲಕ ₹2 ಕೋಟಿ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. 

ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಇ.ಡಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಆರೋಪಪಟ್ಟಿಯಲ್ಲಿ ಶಿವಕುಮಾರ್ ಹೆಸರನ್ನೂ ಕೇಂದ್ರೀಯ ತನಿಖಾ ತಂಡ ಸೇರಿಸಿದೆ. ಆದರೆ, ಅವರನ್ನು ಆರೋಪಿಯಾಗಿ ಹೆಸರಿಸಲಾಗಿದೆಯೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಶಿವಕುಮಾರ್ ಅವರು ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಈ ಮೊತ್ತ ಪಾವತಿಸಿದ್ದಾರೆ. 

ADVERTISEMENT

ದೇಣಿಗೆ ನೀಡಿರುವುದಾಗಿ ಶಿವಕುಮಾರ್ ಅವರು ಇ.ಡಿ.ಗೆ ನೀಡಿರುವ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ, ಯಂಗ್‌ ಇಂಡಿಯನ್‌ ಕಾರ್ಯಾಚರಣೆಯ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲ. ‘ಎಐಸಿಸಿ ಖಜಾಂಚಿ ಪವನ್‌ ಬನ್ಸಾಲ್‌ ಸೂಚನೆಯ ಮೇರೆಗೆ ದೇಣಿಗೆ ಪಾವತಿಸಿದ್ದೇನೆ’ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಕಳೆದ ತಿಂಗಳು ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರ ಜೂನ್‌ 26ರಂದು ದಾಖಲಿಸಿದ ಖಾಸಗಿ ದೂರನ್ನು ಪಟಿಯಾಲಾ ಹೌಸ್‌ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ, ಇ.ಡಿ ತನಿಖೆಯು 2021ರಲ್ಲಿ ಶುರುವಾಗಿತ್ತು.  ಸೋನಿಯಾ, ರಾಹುಲ್, ಸ್ಯಾಮ್‌ ಪಿತ್ರೊಡಾ, ಕಾಂಗ್ರೆಸ್ ಮುಖಂಡರಾಗಿದ್ದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್, ಖಾಸಗಿ ಕಂಪನಿಯಾದ ಯಂಗ್‌ ಇಂಡಿಯಾ ಮತ್ತು ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ದೂರಿನಲ್ಲಿ ಎತ್ತಿತೋರಿಸಲಾಗಿತ್ತು.

ಇವರೆಲ್ಲ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ ₹2,000 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಸ್ವಾಧಿನಕ್ಕೆ ತೆಗೆದುಕೊಳ್ಳುವಲ್ಲಿ ಹಣದ ಅಕ್ರಮ ವರ್ಗಾವಣೆ ನಡೆಸಿರುವುದನ್ನು ದೂರಿನಲ್ಲಿ ಹೇಳಲಾಗಿದೆ ಎಂದು ಇ.ಡಿ ಉಲ್ಲೇಖಿಸಿತ್ತು. ನ್ಯಾಷನಲ್ ಹೆರಾಲ್ಡ್‌  ಮಾಧ್ಯಮ ಸಂಸ್ಥೆಯ (ಪತ್ರಿಕೆ ಮತ್ತು ವೆಬ್‌ ತಾಣ) ಪ್ರಕಾಶನ ಸಂಸ್ಥೆ ಎಜೆಎಲ್‌. ಇದರ ಮಾಲೀಕತ್ವವನ್ನು ಯಂಗ್ ಇಂಡಿಯನ್ ಪ್ರೈ.ಲಿ. ಹೊಂದಿದೆ. ಯಂಗ್ ಇಂಡಿಯನ್ ಕಂಪನಿಯಲ್ಲಿ ತಲಾ ಶೇಕಡ 38ರಷ್ಟು ಷೇರುಗಳನ್ನು ಸೋನಿಯಾ ಮತ್ತು ರಾಹುಲ್ ಹೊಂದಿದ್ದಾರೆ.

ಇ.ಡಿ ಈ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಅವರನ್ನು 2 ವರ್ಷಗಳ ಹಿಂದೆ ಸುದೀರ್ಘ ವಿಚಾರಣೆಗೆ ಗುರಿಪಡಿಸಿತ್ತು.

ಕದ್ದುಮುಚ್ಚಿ ಹಣ ನೀಡಿಲ್ಲ: ಶಿವಕುಮಾರ್
ವಿಜಯಪುರ: ‘ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ‌. ಅದಕ್ಕೆ ನಾನು ಹಾಗೂ ಸುರೇಶ್ ತಲಾ ₹25 ಲಕ್ಷ ದುಡ್ಡು ಕೊಟ್ಟಿದ್ದೇವೆ. ‌ನಮ್ಮ ಟ್ರಸ್ಟ್‌ನಿಂದಲೂ ದೇಣಿಗೆ ನೀಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೊಲ್ಹಾರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಹೋದರ ಡಿ.ಕೆ.ಸುರೇಶ, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಸುದ್ದಿಗಾರರಿಗೆ ಉತ್ತರಿಸಿದ ಅವರು, ‘ನಾವು ದುಡಿದ ಆಸ್ತಿಯಿಂದ ರಾಜಾರೋಷವಾಗಿ ಹಣ ನೀಡಿದ್ದೇವೆ. ನಾವು ಕದ್ದುಮುಚ್ಚಿ ನೀಡಿಲ್ಲ’ ಎಂದು ಹೇಳಿದರು.
ಯಾವುದೇ ಸಂಸ್ಥೆಗೆ ದೇಣಿಗೆ ನೀಡುವುದು ತಪ್ಪೇ??
– ಸಿದ್ದರಾಮಯ್ಯ, ಮುಖ್ಯಮಂತ್ರಿ
ರೇವಂತ ರೆಡ್ಡಿ ಹೆಸರೂ ಉಲ್ಲೇಖ?
ಹೈದರಾಬಾದ್: ಇ.ಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರ ಹೆಸರಿದೆ ಎಂದು ವರದಿಯಾಗಿದೆ. ರೇವಂತ ರೆಡ್ಡಿ ಅವರು ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದಾಗ ‘ಯಂಗ್ ಇಂಡಿಯನ್‌’ ಸಂಸ್ಥೆಗೆ ಹಣ ಕ್ರೋಡೀಕರಿಸಲು ಒತ್ತು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ ಎನ್ನಲಾ ಗಿದೆ. ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ‘ರೇವಂತ ರೆಡ್ಡಿ ಅವರು ತೆಲಂಗಾಣವನ್ನು ಕಾಂಗ್ರೆಸ್‌ ಪಕ್ಷದ ಎ.ಟಿ.ಎಂ ಆಗಿ ಪರಿವರ್ತಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.