ADVERTISEMENT

ಗ್ರಾಮಸ್ಥರ ಗುಳೆ , ಕಾರ್ಮಿಕರ ಬರ

ಮಂಗನ ಕಾಯಿಲೆ ವ್ಯಾಪಿಸಿದ ಪ್ರದೇಶಗಳಲ್ಲಿ ನೀರವ ಮೌನ, ಶಾಲೆಗಳಲ್ಲಿ ಹಾಜರಾತಿ ಶೂನ್ಯ

ಚಂದ್ರಹಾಸ ಹಿರೇಮಳಲಿ
Published 12 ಜನವರಿ 2019, 19:22 IST
Last Updated 12 ಜನವರಿ 2019, 19:22 IST
ಸಾಗರ ತಾಲ್ಲೂಕು ಅರಳಗೋಡು ಬಳಿ ಕಾರ್ಮಿಕರು ಬಾರದೆ ಮರದಲ್ಲೇ ಒಣಗಿದ ಅಡಿಕೆ ಗೊನೆ
ಸಾಗರ ತಾಲ್ಲೂಕು ಅರಳಗೋಡು ಬಳಿ ಕಾರ್ಮಿಕರು ಬಾರದೆ ಮರದಲ್ಲೇ ಒಣಗಿದ ಅಡಿಕೆ ಗೊನೆ   

ಶಿವಮೊಗ್ಗ:ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ಸತ್ತ ಮಂಗಗಳು ಪ್ರತಿದಿನವೂ ಪತ್ತೆಯಾಗುತ್ತಿವೆ. ಜಾನುವಾರು ಸಮೇತ ಜನರು ಮನೆಗಳನ್ನು ತೊರೆದು ಗುಳೆಹೋಗುತ್ತಿದ್ದಾರೆ. ಕೊಯ್ಲಿಗೆ ಕಾರ್ಮಿಕರು ಬಾರದೇ ಅಡಿಕೆ ಗೊನೆಗಳು ಮರದಲ್ಲೇ ಒಣಗುತ್ತಿವೆ.

ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿದ ಸಾಗರ ತಾಲ್ಲೂಕಿನ ಅರಳಗೋಡು, ಇಟ್ಟಿಗೆ, ಸಂಪ, ನಂದೋಡಿ, ಬಣ್ಣುಮನೆ, ವಾಟೆಹಕ್ಲು, ಅಳಗೋಡು ಗ್ರಾಮಗಳ ಬಹುತೇಕ ಜನರು ಊರು ತೊರೆದಿದ್ದಾರೆ. ಜನರು ಇಲ್ಲದೆಗ್ರಾಮಗಳುಬಿಕೋ ಎನ್ನುತ್ತಿವೆ. ಮನೆಯ ಸದಸ್ಯರಿಗೆ ಸೋಂಕು ತಗುಲಿದ ಕಾರಣ ಕೆಲವರು ಆಸ್ಪತ್ರೆಗಳಲ್ಲಿ ರೋಗಿಯ ಆರೈಕೆ ಮಾಡುತ್ತಿದ್ದರೆ, ಬಹುತೇಕ ಮಹಿಳೆಯರು ಮಕ್ಕಳನ್ನು ಕರೆದುಕೊಂಡು ನೆಂಟರ ಮನೆಗಳಿಗೆ ಹೋಗಿದ್ದಾರೆ. ಕೆಲವು ಕುಟುಂಬಗಳು ಜಾನುವಾರು ಸಮೇತ ಗುಳೆಹೋಗಿವೆ.

ಒಣಗುತ್ತಿರುವ ಅಡಿಕೆ:ಮಲೆನಾಡಿನಲ್ಲಿ ಜನವರಿ ಅಂತ್ಯದವರೆಗೂ ಅಡಿಕೆ ಕೊಯ್ಲು ಇರುತ್ತದೆ. ಮೊದಲೆರಡು ಕೊಯ್ಲು ತೆಗೆಯಲಾಗಿತ್ತು. ಮಂಗನ ಕಾಯಿಲೆ ಹರಡಿದ ಪರಿಣಾಮ ಈಗ ಕೊಯ್ಲಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅಡಿಕೆ ತೋಟಗಳಲ್ಲೂಮಂಗಗಳ ಮೃತದೇಹ
ಗಳು ಪತ್ತೆಯಾಗಿರುವುದು ಅವರ ಆತಂಕ ಹೆಚ್ಚಲು ಕಾರಣ. ಹಾಗಾಗಿ, ಬಹುತೇಕ ತೋಟಗಳಲ್ಲಿ ಅಡಿಕೆ ಗೊನೆಗಳು ಮರದಲ್ಲೇ ಒಣಗುತ್ತಿವೆ.

ADVERTISEMENT

‘10 ಮನೆಗಳ ಗ್ರಾಮ ಇಟ್ಟಿಗೆ.ಮೂರುಮನೆಗಳಲ್ಲಿ ಒಂದಷ್ಟು ಜನರು ಇದ್ದಾರೆ. ಉಳಿದ ಮನೆಗಳು ಖಾಲಿಯಾಗಿವೆ. ಇಂತಹ ಸಂಕಷ್ಟ ಹಿಂದೆ ಬಂದಿರ
ಲಿಲ್ಲ. ಪತ್ನಿಗೂ ಸೋಂಕು ತಗುಲಿದ ಕಾರಣ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದೇವೆ’ ಎಂದು ಅರಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅವರ ಪತಿ ಲಕ್ಷ್ಮಿನಾರಾಯಣ ಹೇಳಿದರು.

ಶಾಲೆಗಳತ್ತ ಸುಳಿಯದ ಮಕ್ಕಳು: ಅರಳಗೋಡು, ಮಂಡವಳ್ಳಿ, ನಂದೋಡಿ, ಇಟ್ಟಿಗೆ ಗ್ರಾಮಗಳ ಮಕ್ಕಳು ಶಾಲೆಗಳಿಗೆ ಬರುತ್ತಿಲ್ಲ. ನಿತ್ಯವೂ ಶಿಕ್ಷಕರು ಬಂದು ಬಾಗಿಲು ತೆರೆಯುತ್ತಾರೆ. ಶಾಲೆಯಲ್ಲೇ ಕಾಲಕಳೆದು ಸಂಜೆ ವಾಪಸ್ ಹೋಗುತ್ತಾರೆ. ಒಂದು ತಿಂಗಳಿನಿಂದ ಇದೇ ಸ್ಥಿತಿ ಮುಂದುವರಿದಿದೆ.

‘ಇಬ್ಬರು ಮಕ್ಕಳಿಗೆ ಮಂಗನ ಕಾಯಿಲೆಯ ವೈರಸ್‌ ಇರುವುದು ದೃಢಪಟ್ಟ ಕಾರಣ ಉಳಿದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಅರಳಗೋಡು ಸರ್ಕಾರಿ ಶಾಲೆಯ ಶಿಕ್ಷಕರು.

ವೇಗ ಪಡೆದ ಲಸಿಕೆ ಅಭಿಯಾನ: ಭಾರಂಗಿ, ತಾಳಗುಪ್ಪ, ಆವಿನಹಳ್ಳಿ, ತುಮರಿ, ಹೊಳೆಬಾಗಿಲು, ಕಾಳಮಂಜಿ, ಮುಂಡಳ್ಳಿ, ಮರಬಿಡಿ ಭಾಗದಲ್ಲಿ ಜನರಿಗೆ ಕೆಎಫ್‌ಡಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗಿದೆ. ಅರಳಗೋಡು ಸುತ್ತಲ ಗ್ರಾಮಗಳಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತಿದೆ.

ಮತ್ತೆ 6 ಮಂಗಗಳ ಶವ ಪತ್ತೆ

ಉಡುಪಿ: ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯ ಕಂಡ್ಲೂರು, ಬೆಳ್ವೆ, ಕುಕ್ಕೆಹಳ್ಳಿಯಲ್ಲಿ ಶನಿವಾರ ಮತ್ತೆ 6 ಮಂಗಗಳ ಶವಗಳು ಪತ್ತೆಯಾಗಿವೆ ಎಂದು ಡಿಎಚ್‌ಒ ಡಾ.ರೋಹಿಣಿ ತಿಳಿಸಿದ್ದಾರೆ.

ಇವುಗಳ ಪೈಕಿ ಒಂದು ಕೊಳೆತ ಸ್ಥಿತಿಯಲ್ಲಿದೆ. ಮೊತ್ತೊಂದು ಮಂಗ ಹಲ್ಲೆಯಿಂದ ಮೃತಪಟ್ಟಿದೆ. ಉಳಿದ 4 ಮಂಗಗಳ ಶವಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.‌

ಜಿಲ್ಲೆಯಲ್ಲಿ ಇದುವರೆಗೂ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿಲ್ಲ. ಶಂಕಿತ ವ್ಯಕ್ತಿಯ ಪರೀಕ್ಷಾ ವರದಿ ಕೈಸೇರಿದ ಬಳಿಕ ಸ್ಪಷ್ಟವಾಗಲಿದೆ ಎಂದರು.

ಸಿಬ್ಬಂದಿಗೆ ಅರಿವು

ಸಿದ್ದಾಪುರ (ಉತ್ತರ ಕನ್ನಡ): ‘ತಾಲ್ಲೂಕಿನ ಹೆಗ್ಗೋಡಮನೆ ಮತ್ತು ನಾಣಿಕಟ್ಟಾ ಸಮೀಪ ಎರಡು ಮಂಗಗಳು ಸತ್ತಿವೆ. ಮಂಗನ ಮೈಯಲ್ಲಿದ್ದ ಉಣ್ಣೆಯನ್ನು ಹೊನ್ನಾವರದ ಕೆಎಫ್‌ಡಿ ಸಿಬ್ಬಂದಿ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಂಗನ ಕಾಯಿಲೆ ಕುರಿತು ಶನಿವಾರ ತರಬೇತಿ ನೀಡಲಾಯಿತು.

ಅಧಿಕ ವೈರಸ್‌ ಪತ್ತೆ

ಜಿಲ್ಲೆಯಿಂದ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿದ ಉಣುಗುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮಂಗನ ಕಾಯಿಲೆ ವೈರಸ್‌ಗಳಿರುವುದು ಪತ್ತೆಯಾಗಿದೆ.

ಈ ಬಾರಿ ರೋಗ ವೇಗವಾಗಿ ಹರಡಿರಬಹುದು. ಶಿವಮೊಗ್ಗದಲ್ಲೂ ವೈರಸ್‌ ಪತ್ತೆ ಪರೀಕ್ಷೆ ಕೇಂದ್ರ ಆರಂಭಿಸಿದ್ದೇವೆ.ತ್ವರಿತವಾಗಿ ರೋಗದೃಢಪಡಿಸಲುಇದರಿಂದ ಸಹಾಯವಾಗುತ್ತದೆಎನ್ನುತ್ತಾರೆ ಕ್ರಿಮಿ ಸಂಶೋಧನಾ ಪ್ರಯೋಗಾಲಯದ ಉಪ ನಿರ್ದೇಶಕ
-ಡಾ. ರವಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.