ADVERTISEMENT

ಯುಜಿಸಿ: 6 ಸಾವಿರ ‘ಅತಿಥಿ’ಗಳಿಗೆ ನಿರುದ್ಯೋಗ!

ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಪಡೆದವರಿಗಷ್ಟೇ ಮನ್ನಣೆ* ಡಿ.4ಕ್ಕೆ ಪ್ರಕ್ರಿಯೆ ಮುಕ್ತಾಯ

ಚಂದ್ರಹಾಸ ಹಿರೇಮಳಲಿ
Published 25 ನವೆಂಬರ್ 2025, 23:10 IST
Last Updated 25 ನವೆಂಬರ್ 2025, 23:10 IST
<div class="paragraphs"><p>ಶಿಕ್ಷಕ</p></div>

ಶಿಕ್ಷಕ

   

– ಗೆಟ್ಟಿ ಚಿತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎರಡು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದ್ದ ಯುಜಿಸಿ ಅರ್ಹತೆ ಪಡೆಯದ 6,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡಿದ್ದಾರೆ.

ADVERTISEMENT

ಹೈಕೋರ್ಟ್‌ ಆದೇಶದಂತೆ ಕಾಲೇಜು ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅರ್ಹತೆ ಆಧಾರದಲ್ಲಿ 2025–26ನೇ ಸಾಲಿನ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್‌ಗಳ ಬೋಧನೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು ಡಿ.4ಕ್ಕೆ ಮುಕ್ತಾಯಗೊಳ್ಳಲಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1995–96ರವರೆಗೆ ಕೆಲಸ ಮಾಡಿದ್ದ ಅರೆಕಾಲಿಕ ಉಪನ್ಯಾಸಕರನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಕಾಯಂ ಮಾಡಲು ಅಂದಿನ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ‘ಅರೆಕಾಲಿಕ’ ಪದನಾಮದ ಮೇಲೆ ಸೇವಾ ಭದ್ರತೆಗೆ ಒತ್ತಾಯಿಸಿ, ಮತ್ತೆ ಕೋರ್ಟ್‌ ಮೊರೆಹೋಗಬಹುದು ಎಂಬ ದೂರದೃಷ್ಟಿಯಿಂದ 2003ರಲ್ಲಿ ‘ಅರೆಕಾಲಿಕ’ ಪದನಾಮ ಬದಲಾಯಿಸಿ ‘ಅತಿಥಿ’ ಎಂದು ತಿದ್ದುಪಡಿ ಮಾಡಲಾಗಿತ್ತು. 

ಅಂದು ತಿಂಗಳಿಗೆ ₹1,200 ಗೌರವಧನ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸಿದ್ದರು. ಹೋರಾಟ ತೀವ್ರಗೊಂಡಾಗಲೆಲ್ಲ ಸರ್ಕಾರ ಸ್ವಲ್ಪ ಸ್ವಲ್ಪವೇ ಗೌರವಧನ ಹೆಚ್ಚಳ ಮಾಡುತ್ತಾ ಬಂದಿತು. ಅತಿಥಿ ಉಪನ್ಯಾಸಕರ ಸೇವಾ ವಿಲೀನ, ಸೇವಾಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚನೆ ಮಾಡಲು ಒತ್ತಾಯ ಹೆಚ್ಚಾದ ನಂತರ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಸೇವಾ ಭದ್ರತೆಗೆ ಶಾಶ್ವತ ನಿಯಮಾವಳಿ ರಚನೆ ಸರ್ಕಾರದ ಕಾರ್ಯನೀತಿ ವಿಷಯ. ಹಾಗಾಗಿ, ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿತ್ತು. ಆದರೆ, ನಂತರ ಬಂದ ಸರ್ಕಾರಗಳು ಸೇವಾ ಭದ್ರತೆಗೆ ಆದ್ಯತೆ ನೀಡಲೇ ಇಲ್ಲ. ಆದರೆ, 2022–23ನೇ ಸಾಲಿನಲ್ಲಿ ಗೌರವಧನ ದ್ವಿಗುಣಗೊಳಿಸಲಾಯಿತು. 

ಸೇವಾ ಭದ್ರತೆಯ ವಿಚಾರ ಚರ್ಚೆಯಲ್ಲಿ ಇರುವಾಗಲೇ ಯುಜಿಸಿಯು, ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಇಲ್ಲವೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ತೇರ್ಗಡೆಯಾಗಿರಬೇಕು, ಪಿಎಚ್‌.ಡಿ ಪಡೆದಿರಬೇಕು ಎಂದು ನಿಯಮ ಜಾರಿಗೆ ತಂದಿತು. ಪ್ರಥಮ ದರ್ಜೆ ಕಾಲೇಜುಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಯುಜಿಸಿ ರೂಪಿಸಿದ ನಿಯಮವನ್ನು ಪ್ರಶ್ನಿಸಿ, ಅತಿಥಿ ಉಪನ್ಯಾಸಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನಿಗದಿಪಡಿಸಿದ ‘ಅರ್ಹತೆ’ ಇರುವವರು, ಇಲ್ಲದವರ ನಡುವಿನ ಕಾನೂನು ಹೋರಾಟ ಆರಂಭವಾಗಿದ್ದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಕಗ್ಗಂಟಾಗಿತ್ತು. ವಿಚಾರಣೆಯ ನಂತರ ಯುಜಿಸಿ ನಿಯಮವನ್ನೇ ಕೋರ್ಟ್‌ ಎತ್ತಿಹಿಡಿದಿತ್ತು.

ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಿಂದಿನಿಂದಲೂ ಕೆಲಸ ಮಾಡುತ್ತಾ ಬಂದಿರುವವರಿಗೆ ನಿಯಮ ಪೂರ್ವಾನ್ವಯ ಮಾಡಬಾರದು ಎಂಬ ಕೂಗಿಗೆ ಮನ್ನಣೆ ಸಿಗಲಿಲ್ಲ. ವಿದ್ಯಾರ್ಹತೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ನೀಡಿದ್ದ ಮೂರು ವರ್ಷಗಳ ಗಡುವೂ ಮುಕ್ತಾಯವಾಗಿದ್ದು, ಅತಿಥಿಗಳ ದಶಕಗಳ ಹೋರಾಟವೂ ಅಂತ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.