ADVERTISEMENT

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 1 ಲಕ್ಷ ಜನ ನಿರೀಕ್ಷೆ: ಪರಶುರಾಮ ಪುತ್ಥಳಿ ಉಡುಗೊರೆ

ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಮೋದಿಗೆ ಪರಶುರಾಮ ಪುತ್ಥಳಿ ಉಡುಗೊರೆ 

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 7:55 IST
Last Updated 31 ಆಗಸ್ಟ್ 2022, 7:55 IST
ಪ್ರಧಾನಿ ನರೇಂದ್ರ‌ ಮೋದಿ
ಪ್ರಧಾನಿ ನರೇಂದ್ರ‌ ಮೋದಿ    

ಬೆಂಗಳೂರು: ಪ್ರಧಾನಿ ನರೇಂದ್ರ‌ ಮೋದಿ ಆಗಮನ ಹಿನ್ನೆಲೆಯಲ್ಲಿ ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶದ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ನೇತೃತ್ವದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು 1ಲಕ್ಷಕ್ಕೂ ಮೇಲ್ಪಟ್ಟು ಜನರು ಸೇರುವ ನಿರೀಕ್ಷೆ ಇದೆ.

ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಬಳಿಕ ಈ ಸಮಾವೇಶ ನಡೆಯಲಿದೆ. ರಾಜಕೀಯವಾಗಿಯೂ ಇದು ಮಹತ್ವ ಪಡೆದಿರುವುದರಿಂದ ಸಣ್ಣಪುಟ್ಟ ಸಂಗತಿಗಳಿಗೂ ಬಿಜೆಪಿ ವಿಶೇಷ ಲಕ್ಷ್ಯ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮದ ಖುದ್ದು ಮೇಲುಸ್ತುವಾರಿ ವಹಿಸಿದ್ದು, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜತೆಗೆ ಈಗಾಗಲೇ ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಸಲಾಗಿದೆ.

ಈ ಸಮಾವೇಶಕ್ಕೆ ಕರಾವಳಿ ಜಿಲ್ಲೆಗಳಲ್ಲೇ ಇತ್ತೀಚಿನ‌ ದಿನಗಳಲ್ಲಿ ಸೇರದೇ ಇರುವಷ್ಟು ಜನರನ್ನು ಸೇರಿಸಲಾಗುತ್ತಿದೆ. ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಸ್ವಯಂಪ್ರೇರಣೆಯಿಂದಲೇ ಜನರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸುಮಾರು ಒಂದು ಲಕ್ಷ ಜನರು ಮೋದಿ ಭಾಷಣ ಕೇಳುವುದಕ್ಕೆ ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ADVERTISEMENT

2000 ಬಸ್ :
ಸಮಾವೇಶ ಸ್ಥಳಕ್ಕೆ ಉಭಯ ಜಿಲ್ಲೆಗಳಿಂದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಕರೆತರುವುದಕ್ಕೆ ಸುಮಾರು ೨೦೦೦ ಬಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ‌ಕಾರ್ಯಕ್ರಮದ ಬಳಿಕ ಬಿಜೆಪಿ ಕೋರ್ ಕಮಿಟಿ ಸಭೆಯೂ ಸೇರಿದಂತೆ ಸುಮಾರು ಒಂದು ಗಂಟೆ ಕಾಲ ಪಕ್ಷದ ನಾಯಕರ ಜತೆಗೆ ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಪರಶುರಾಮ ಪುತ್ಥಳಿ :
ಪ್ರಧಾನಿ ಮೋದಿಯವರಿಗೆ ಈ ಕಾರ್ಯಕ್ರಮದ ಸ್ಮರಣಾರ್ಥವಾಗಿ ತುಳುನಾಡು ನಿರ್ಮಾತೃ ಪರಶುರಾಮನ ಭವ್ಯ ಪುತ್ಥಳಿಯನ್ನು ಉಡುಗೊರೆ ರೂಪದಲ್ಲಿ ಕೊಡಲು ನಿಶ್ಚಯಿಸಲಾಗಿದೆ. ಈ ಪುತ್ಥಳಿಯನ್ನು ವಿಶೇಷ ಆಸ್ಥೆಯಿಂದ ಸಿದ್ಧಪಡಿಸುವುದಕ್ಕೆ ಸಚಿವ ಸುನಿಲ್ ಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಕರಾವಳಿಯ ಇತಿಹಾಸದಲ್ಲಿ ನಭೂತೋ ಎಂಬಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಕೇಸರಿಪಡೆ ಈಗ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.