ADVERTISEMENT

ಹೈಕೋರ್ಟ್ ಕಟಕಟೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 18:08 IST
Last Updated 11 ಅಕ್ಟೋಬರ್ 2022, 18:08 IST

ಬೆಂಗಳೂರು: ‘ವಾಸ್ತವ ಆದಾಯ ಬಚ್ಚಿಟ್ಟು ಸುಳ್ಳುಪ್ರಮಾಣ ಪತ್ರ ಸಲ್ಲಿಸಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಗೆದ್ದಿರುವ ಪ್ರಜ್ವಲ್‌ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸ ಬೇಕು’ ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದ ಪ್ರಕರಣ ಮಂಗಳವಾರ ಹೈಕೋರ್ಟ್‌ನಲ್ಲಿ ನಡೆಯಿತು. ಪ್ರಜ್ವಲ್ ಅವರು ವಿಚಾರಣೆ ಎದುರಿಸಿದರು.

ಪ್ರಜ್ವಲ್‌ ರೇವಣ್ಣ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡಿದ್ದ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಕಟಕಟೆಯಲ್ಲಿ ನಿಂತು ಪ್ರಮಾಣ ಮಾಡಿ ಮುಖ್ಯ ವಿಚಾರಣೆ ಎದುರಿಸಿದ ಪ್ರಜ್ವಲ್ ರೇವಣ್ಣ, ಹಿರಿಯ ವಕೀಲ ಉದಯ ಹೊಳ್ಳ ಮತ್ತು ಕೇಶವ ರೆಡ್ಡಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ADVERTISEMENT

ಉತ್ತರ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿದೆ. ‘ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ’ ಎಂಬುದು ಅರ್ಜಿದಾರರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.