ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು ಸಕ್ಷಮ ನ್ಯಾಯಾಲಯಕ್ಕೆ ಬಿ ಅಂತಿಮ ವರದಿ ಸಲ್ಲಿಸಿರುವುದನ್ನು ವಿರೋಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಈ ಕುರಿತ ಅರ್ಜಿಯನ್ನು ಇ.ಡಿ ಪರ ವಕೀಲ ಮಧುಕರ ಎಂ.ದೇಶಪಾಂಡೆ ಅವರು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದೆ ಸಲ್ಲಿಸಿದರು.
ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು, ‘ಪ್ರಕರಣದಲ್ಲಿ ಆರೋಪವು ಅನುಸೂಚಿತ ಅಪರಾಧ ಅಲ್ಲ ಎಂದು ಲೋಕಾಯುಕ್ತ ಬಿ ಅಂತಿಮ ವರದಿ ಸಲ್ಲಿಸಿದೆ. ದೂರುದಾರರು ಈಗಾಗಲೇ ಈ ವರದಿ ವಿರೋಧಿಸಿ ಅರ್ಜಿ ಸಲ್ಲಿಸಿದ್ದು, ಇ.ಡಿ ಕೂಡಾ ಇಂತಹುದೇ ವಿರೋಧದ ಅರ್ಜಿಯನ್ನು ಸಲ್ಲಿಸುವುದಕ್ಕೆ ಹೊಂದಿರುವ ನ್ಯಾಯಯುತ ಅಧಿಕಾರ ಏನು ಮತ್ತು ಇದನ್ನು ವಿಚಾರಣೆಗೆ ಸ್ವೀಕಾರಾರ್ಹ ಎಂದು ಪರಿಗಣಿಸುವುದು ಎಷ್ಟು ಸೂಕ್ತ ?, ಒಂದು ವೇಳೆ ಈ ನ್ಯಾಯಾಲಯ ಬಿ ಅಂತಿಮ ವರದಿಯನ್ನು ಒಪ್ಪಿಕೊಂಡರೆ ಏನು ಮಾಡುತ್ತೀರಿ’ ಎಂದು ದೇಶಪಾಂಡೆ ಅವರನ್ನು ಪ್ರಶ್ನಿಸಿತು.
ಇದಕ್ಕೆ ದೇಶಪಾಂಡೆ, ‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002ರ (ಪಿಎಂಎಲ್‌ಎ) ಕಲಂ 66 (2)ರ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಲೋಕಾಯುಕ್ತ ತನಿಖಾಧಿಕಾರಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇ.ಡಿ ತನ್ನ ತನಿಖೆ ಮುಂದುವರಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಹೀಗಾಗಿ, ನ್ಯಾಯಾಲಯ ಅರ್ಜಿಯನ್ನು ಪರಿಗಣಿಸಬಹುದು ಅಥವಾ ಪರಿಗಣಿಸದೆಯೇ ವಜಾಗೊಳಿಸಬಹುದು. ಒಂದು ವೇಳೆ ನಮ್ಮ ವಿರೋಧದ ಅರ್ಜಿಯನ್ನು ವಜಾ ಮಾಡಿದರೆ ಆ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಇ.ಡಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಜೊತೆ ತನಿಖೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆಯೇ ಹೇಗೆ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಲೋಕಾಯುಕ್ತ ಪರ ವಕೀಲ ವೆಂಕಟೇಶ ಅರಬಟ್ಟಿ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದರು. ದೂರುದಾರ ಸ್ನೇಹಮಯಿ ಕೃಷ್ಣ ಹಾಜರಿದ್ದರು.
‘ಮನೆಗೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪದಿಂದ ನನ್ನನ್ನು ಕೈಬಿಡಬೇಕು’ ಎಂದು ಕೋರಿದ್ದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಗುರುವಾರ ಪ್ರಕಟಿಸಿದರು.
‘ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ನ್ಯಾಯಾಧೀಶರು ದೋಷಾರೋಪ ನಿಗದಿಗೊಳಿಸಿರುವುದನ್ನು ಓದಿ ಹೇಳಿದರು. ಈ ಆದೇಶ ಪ್ರಕಟಿಸುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ದುಃಖಭರಿತರಾದರು. ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.