ADVERTISEMENT

ಉ.ಕ ಪ್ರತ್ಯೇಕ ರಾಜ್ಯ ಘೋಷಣೆಗೆ ಆಗ್ರಹಿಸಿ ಧ್ವಜಾರೋಹಣ

,

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 20:15 IST
Last Updated 1 ಜನವರಿ 2019, 20:15 IST
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ, ‘ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ’ ವತಿಯಿಂದ ಮುಧೋಳದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಲಾಯಿತು
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ, ‘ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ’ ವತಿಯಿಂದ ಮುಧೋಳದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಲಾಯಿತು   

ಹುಬ್ಬಳ್ಳಿ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ, ‘ಪ್ರತ್ಯೇಕ ಉತ್ತರ ಕರ್ನಾಟಕ ಸಮಿತಿ’ ವತಿಯಿಂದ ಮಂಗಳವಾರ ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ.

ಮುಧೋಳದಲ್ಲಿ ಈ ವಿಷಯ ಗೊತ್ತಾದ ತಕ್ಷಣ ಅಲ್ಲಿಗೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧ್ವಜವನ್ನು ತೆರವುಗೊಳಿಸಿ, ಆಕ್ರೋಶ ವ್ಯಕ್ತಪಡಿಸಿದರು. ಧ್ವಜಾರೋಹಣ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಬುಧವಾರ (ಜ.2) ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದಾರೆ.

ಮುಧೋಳದ ಜೈ ಭಾರತ ವೃತ್ತದಲ್ಲಿರುವ ಸಮಿತಿಯ ಉಪ ಕಚೇರಿ ಎದುರು, ಮುಖಂಡರಾದ ಮಲ್ಲನಗೌಡ ಪಾಟೀಲ ಹಾಗೂ ಕುಮಾರ ನಾಡಗೌಡ ಧ್ವಜಾರೋಹಣ ಮಾಡಿದರು. ಕೇಸರಿ, ಹಳದಿ, ಹಸಿರು ಬಣ್ಣದ ಮಧ್ಯೆ ನೀಲಿ ವರ್ಣದಲ್ಲಿ 13 ಜಿಲ್ಲೆಗಳನ್ನೊಳಗೊಂಡ ನಕಾಶೆ ಇರುವ ಧ್ವಜವನ್ನು ಹಾರಿಸಲಾಯಿತು.

ADVERTISEMENT

ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ನಿವೃತ್ತ ಸೈನಿಕರ ಘಟಕದ ಅಧ್ಯಕ್ಷ ಶ್ರೀಶೈಲ ಪಸಾರ, ಮುಖಂಡರಾದ ರಾಮಕೃಷ್ಣ ಕುಲಕರ್ಣಿ, ಭೀಮಶಿ ಹುನ್ನೂರ, ಜಗನ್ನಾಥ ಶಿರಬೂರ, ಲಕ್ಷ್ಮಿ ರಜಪೂತ, ಶೈಲಾ ದೇವಪೂಜಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಹಿರೇಬಾಗೇವಾಡಿಯ ಬಡಕಲ್ ಬೀದಿಯ ವಾಣಿಜ್ಯ ಸಂಕಿರ್ಣದಲ್ಲಿ ಧ್ವಜಾರೋಹಣ ಮಾಡಲಾಯಿತು. ಅಲ್ಲೇ ಕಚೇರಿಯನ್ನೂ ಸ್ಥಾಪಿಸಿದ್ದು, ಅದರ ಉದ್ಘಾಟನೆಯೂ ಮಾಡಲಾಗಿದೆ.

ಸಮಿತಿಯ ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ ಮಾತನಾಡಿ, ‘ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೀಗಾಗಿ ನಮ್ಮ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ವರ್ಷ ಜನವರಿ 1ರಂದು ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲಾಗುವುದು’ ಎಂದರು.

ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣ, ಬಸವಂತರಾಯ ಉಳ್ಳೆಗಡ್ಡಿ, ಡಾ.ಎಫ್‌.ಎಸ್.ಪಾಟೀಲ, ಪ್ರಶಾಂತ ದೇಸಾಯಿ, ಯಲ್ಲನಗೌಡ ಪಾಟೀಲ, ಸಂತೋಷ ಕಾಗತಿ, ಯಲ್ಲಪ್ಪ ಜಕ್ಕಣ್ಣನವರ, ರಾಮಚಂದ್ರ ಬಾನಿಕಟ್ಟಿ, ಅಶೋಕ ನಬಾಪುರೆ ಇದ್ದರು.

ಎರಡೂ ಕಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.