ADVERTISEMENT

ಮುರುಘಾ ಶರಣರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ: ತನಿಖೆಗೆ 5ನೇ ಆರೋಪಿ ಹಾಜರು

ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 22:27 IST
Last Updated 6 ಸೆಪ್ಟೆಂಬರ್ 2022, 22:27 IST
ಗಂಗಾಧರಯ್ಯ
ಗಂಗಾಧರಯ್ಯ   

ಚಿತ್ರದುರ್ಗ: ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರುಲೈಂಗಿಕ ಕಿರುಕುಳ ನೀಡಿರುವ ಆರೋಪದ ಪ್ರಕರಣದ 5ನೇ ಆರೋಪಿ ಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ ತನಿಖಾಧಿಕಾರಿ ಎದುರು ಹಾಜರಾದರು.

ಇಲ್ಲಿನ ಡಿವೈಎಸ್‌ಪಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ನಡೆಸಿದ ತನಿಖಾಧಿಕಾರಿ ಎಚ್‌.ಆರ್‌. ಅನಿಲ್‌ಕುಮಾರ್‌, ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಾಪಸ್‌ ಕಳುಹಿಸಿದರು.

‘ಗಂಗಾಧರಯ್ಯ ತನಿಖಾಧಿಕಾರಿ ಎದುರು ಹಾಜರಾಗಿದ್ದರು. ಅವರ ವಿಚಾರಣೆ ನಡೆಸಿ, ಷರತ್ತು ವಿಧಿಸಿ ಕಳುಹಿಸಲಾಗಿದೆ’ ಎಂದು ಎಸ್ಪಿ ಕೆ.ಪರಶುರಾಮ್‌ ತಿಳಿಸಿದ್ದಾರೆ.

ADVERTISEMENT

ಪ್ರಕರಣ ದಾಖಲಾದ ಎರಡು ದಿನ ಶಿವಮೂರ್ತಿ ಮುರುಘಾ ಶರಣರೊಂದಿಗೆ ಮಠದಲ್ಲಿಯೇ ಇದ್ದ ಗಂಗಾಧರಯ್ಯ, ಆಗಸ್ಟ್‌ 28ರ ಬಳಿಕ ತಲೆಮರೆಸಿಕೊಂಡಿದ್ದರು. ತನಿಖಾಧಿಕಾರಿ ಎದುರು ಹಾಜರಾಗುವಂತೆ ಸೆಪ್ಟೆಂಬರ್‌ 5ರಂದು ನೋಟಿಸ್‌ ನೀಡಲಾಗಿತ್ತು. ಪ್ರಕರಣದಲ್ಲಿ 17 ವರ್ಷದ ಬಾಲಕ ಹಾಗೂ ಪರಮಶಿವಯ್ಯ ಅವರು ಇನ್ನಿಬ್ಬರು ಆರೋಪಿಗಳಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ.

ವಾರ್ಡನ್‌ ಪೊಲೀಸ್‌ ವಶಕ್ಕೆ

ಲೈಂಗಿಕ ಕಿರುಕುಳ ಪ್ರಕರಣದ ಎರಡನೇ ಆರೋಪಿ, ಹಾಸ್ಟೆಲ್‌ನ ಮಹಿಳಾ ವಾರ್ಡನ್‌ರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಸೆ.8ರವರೆಗೆ ವಶಕ್ಕೆ ಪಡೆದಿದ್ದಾರೆ.

ಆ.31ರಂದು ನ್ಯಾಯಾಲಯಕ್ಕೆ ಹಾಜರಾದ ಆರೋಪಿಯನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ಭದ್ರತೆಯ ದೃಷ್ಟಿಯಿಂದ ಅವರನ್ನು ಶಿವಮೊಗ್ಗದ ಕಾರಾಗೃಹದಲ್ಲಿ ಇರಿಸಲಾಗಿತ್ತು.

ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು, ಆರೋಪಿಯನ್ನು ಮಂಗಳವಾರ ಚಿತ್ರದುರ್ಗಕ್ಕೆ ಕರೆತಂದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಿ 6 ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಮೂರು ದಿನ ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಆದೇಶಿಸಿದರು.

ಜೈಲಲ್ಲಿ ಮೌನಕ್ಕೆ ಶರಣು

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಜಿಲ್ಲಾ ಕಾರಾಗೃಹದಲ್ಲಿ ಮೌನಕ್ಕೆ ಶರಣಾಗಿದ್ದಾರೆ.

‘ನಾಲ್ವರು ವಿಚಾರಣಾಧೀನ ಕೈದಿಗಳಿರುವ ಕೊಠಡಿಯಲ್ಲಿ ಅವರನ್ನು ಇರಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸಿದ ಅವರು, ತಿಂಡಿ ಸ್ವೀಕರಿಸಿ ಪತ್ರಿಕೆಗಳನ್ನು ಓದಿದರು. ಗ್ರಂಥಾಲಯದಿಂದ ಕೆಲ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದಾರೆ. ಹೆಚ್ಚಾಗಿ ಯಾರೊಂದಿಗೂ ಮಾತನಾಡದೇ ಮೌನವಾಗಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.