ADVERTISEMENT

ಚೆಕ್‌ಗೆ ಸಹಿ ಕೋರಿ ಮುರುಘಾ ಶ್ರೀ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 21:02 IST
Last Updated 27 ಸೆಪ್ಟೆಂಬರ್ 2022, 21:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ದಡಿ ಪೋಕ್ಸೊ ಮತ್ತು ಜಾತಿನಿಂದನೆ ಪ್ರಕರಣದ ಒಂದನೇ ಆರೋಪಿಯಾಗಿ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ, ‘ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ’ದ (ಎಸ್‌ಜೆಎಂ) ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮಠದ ಬ್ಯಾಂಕ್‌ ಖಾತೆಗಳ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಅನುವಾಗುವಂತೆ ಮತ್ತು ಮಠದ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ಇತರೆ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಪರಿಣಾಮ ಶರಣರ ಪರ ವಕೀಲರು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಈ ಕುರಿತಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಕೋಮಲಾ ತಿರಸ್ಕರಿಸಿದ್ದರು.ಈ ಆದೇಶವನ್ನು ಪ್ರಶ್ನಿಸಿ ಈಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಶಿವಮೂರ್ತಿ ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್‌) ಟ್ರಸ್ಟೀ ಮತ್ತು ಅಧ್ಯಕ್ಷರಾಗಿರತಕ್ಕದ್ದು ಎಂದು2010ರ ನವೆಂಬರ್‌ 26ರಂದು ಟ್ರಸ್ಟ್‌ ಡೀಡ್‌ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದು, ಮಠ ಮತ್ತು ವಿದ್ಯಾಪೀಠದ ಬ್ಯಾಂಕ್‌ ಖಾತೆಯು ಅವರ ಹೆಸರಿನಲ್ಲೇ ಇರತಕ್ಕದ್ದು,ಕೇವಲ ಅಧ್ಯಕ್ಷರು ಮಾತ್ರವೇ ಇದರ ಬ್ಯಾಂಕ್‌ ಖಾತೆ ನಿರ್ವಹಿಸಬೇಕು. ವರ್ಷಕ್ಕೊಮ್ಮೆ ಇದರ ಲೆಕ್ಕಪರಿಶೋಧನೆಯನ್ನು ಅರ್ಹ ವ್ಯಕ್ತಿ ನಡೆಸತಕ್ಕದ್ದು’ ಎಂದು ಟ್ರಸ್ಟ್‌ ದಾಖಲೆಯಲ್ಲಿ ವಿವರಿಸಲಾಗಿದೆ.

ADVERTISEMENT

‘ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಸ್‌ಜೆಎಂ ವಿದ್ಯಾಪೀಠದ ಅಡಿಯಲ್ಲಿ 150 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.