ADVERTISEMENT

‘ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಕರಿಸಲಿ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 12:07 IST
Last Updated 13 ನವೆಂಬರ್ 2019, 12:07 IST

ಬೆಳಗಾವಿ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಮುಸ್ಲಿಮರು ಹಾಗೂ ಮಸೀದಿ ನಿರ್ಮಿಸಲು ಹಿಂದೂಗಳು ಪರಸ್ಪರ ಸಹಕಾರ ನೀಡಬೇಕು. ಸಹಬಾಳ್ವೆದಿಂದ ನಡೆಸಬೇಕು’ ಎಂದು ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಯೋಧ್ಯೆಯ ವಿವಾದಿತ ಜಾಗವು ರಾಮನ ಜನ್ಮ ಸ್ಥಳವೆಂದು ನ್ಯಾಯಾಲಯ ಒಪ್ಪಿಕೊಂಡಂತಾಗಿದೆ. ಅಲ್ಲದೇ, ಮಸೀದಿ ನಿರ್ಮಿಸಲು 5 ಎಕರೆ ಪ್ರದೇಶ ನೀಡಲೂ ಆದೇಶಿಸಿದೆ. ಇದಕ್ಕೆ ಎಲ್ಲರೂ ತಲೆ ಬಾಗಬೇಕು’ ಎಂದರು.

‘ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರ್ಕಾರವು ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ಟ್ರಸ್ಟ್‌ ರಚಿಸಬೇಕು. ನಿರ್ಮಾಣದ ಕಾಮಗಾರಿಯನ್ನೆಲ್ಲ ಟ್ರಸ್ಟ್‌ ನೋಡಿಕೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

‘1992ರಲ್ಲಿ ನಡೆದ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಲ್‌.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಸೇರಿದಂತೆ ಸಾವಿರಾರು ಜನ ಕರಸೇವಕರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರ್ಕಾರ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

ಅನರ್ಹ ಶಾಸಕರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದು ಪಕ್ಷದಲ್ಲಿ ಶಾಸಕರಾಗಿ ಬೇರೊಂದು ಪಕ್ಷಕ್ಕೆ ಹೋಗುವುದು ಸರಿಯಲ್ಲ. ಆ ಪಕ್ಷದಿಂದ ಹೊರಬಂದು ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧಿಸಬೇಕು. ಜನಾದೇಶ ಪಡೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.