ADVERTISEMENT

ಮೈಸೂರು ಅತ್ಯಾಚಾರ ಪ್ರಕರಣ: ಡಿಜಿಪಿ ಮೇಲುಸ್ತುವಾರಿಯಲ್ಲಿ ತನಿಖೆ- ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 4:59 IST
Last Updated 27 ಆಗಸ್ಟ್ 2021, 4:59 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ    

ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಮೇಲುಸ್ತುವಾರಿಯಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ತನಿಖೆಯ ಮೇಲುಸ್ತುವಾರಿ ನಡೆಸುವಂತೆ ಡಿಜಿಪಿಗೆ ನಿರ್ದೇಶನ ನೀಡಿದ್ದೇನೆ. ಡಿಜಿಪಿ ಪ್ರವೀಣ್ ಸೂದ್ ಅವರು ಮೈಸೂರಿಗೆ ತೆರಳುತ್ತಿದ್ದು, ತನಿಖೆ ಕುರಿತು ಪರಿಶೀಲನೆ ನಡೆಸಲಿದ್ದಾರೆ' ಎಂದರು.

ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ನೇರವಾಗಿ ತಮಗೆ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ADVERTISEMENT

ಪ್ರತಿದಿನ 5 ಲಕ್ಷ ಡೋಸ್ ಲಸಿಕೆಗೆ ಬೇಡಿಕೆ: ಸೆಪ್ಟೆಂಬರ್ 1ರಿಂದ ಪ್ರತಿದಿನ ಐದು ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದೆ. ಅದಕ್ಕೆ ಪೂರಕವಾಗಿ ನಿತ್ಯ ಐದು ಲಕ್ಷ ಡೋಸ್ ಲಸಿಕೆ ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಬಳಕೆಯ ಆಧಾರದಲ್ಲಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಆರೋಗ್ಯ ಸಚಿವರು ನೀಡಿದ್ದಾರೆ ಎಂದರು.

ರಾಜ್ಯದ ಬೃಹತ್ ನೀರಾವರಿ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವ ಸಂಬಂಧ ದೆಹಲಿಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಜಲ ವಿವಾದಗಳ ಇತ್ಯರ್ಥಕ್ಕೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ಗಣೇಶೋತ್ಸವ ನಿರ್ಬಂಧ ಸಡಿಲಿಕೆಗೆ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ಇದೇ 30ರಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಚರ್ಚಿಸಿದ ಬಳಿಕ ನಿರ್ಧಾರಕ್ಕೆ ಬರಲಾಗುವುದು' ಎಂದರು.

ಚರ್ಚೆ ನಡೆದಿಲ್ಲ: ದೆಹಲಿ ಪ್ರವಾಸದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿಲ್ಲ. ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ಸೇರಿದಂತೆ ಯಾವುದೇ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.