ADVERTISEMENT

ಜನರು ಸಂಕಷ್ಟದಲ್ಲಿರುವಾಗ ಉತ್ಸವ ಬೇಕಿತ್ತೆ: ನಳಿನ್‌ ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 15:44 IST
Last Updated 3 ಆಗಸ್ಟ್ 2022, 15:44 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಬೆಂಗಳೂರು: ರಾಜ್ಯದ ಜನರು ಅತಿವೃಷ್ಟಿ, ಪ್ರವಾಹದಿಂದ ಸಂಕಷ್ಟದಲ್ಲಿ ಸಿಲುಕಿರುವಾಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ₹ 75 ಕೋಟಿ ವೆಚ್ಚ ಮಾಡಿ ಜನ್ಮದಿನೋತ್ಸವ ಆಚರಿಸಿಕೊಳ್ಳುವ ಅಗತ್ಯವಿತ್ತೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಮಾಜವಾದಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸಿದ್ದರಾಮಯ್ಯ ಜನರು ಸಂಕಷ್ಟದಲ್ಲಿರುವಾಗ ಮಜಾವಾದ ಪ್ರದರ್ಶಿಸಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ, ತನ್ನ ಒಂದು ವರ್ಷದ ಸಂಭ್ರಮಾಚರಣೆಯ ಜನೋತ್ಸವ ರದ್ದುಮಾಡಿತು. ಆದರೆ, ಕಾಂಗ್ರೆಸ್‌ನ ಒಂದು ಗುಂಪು ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಈ ಕಾರ್ಯಕ್ರಮ ನಡೆಸಿದೆ. ಕಾಂಗ್ರೆಸ್‌ ಪಕ್ಷಕ್ಕೆ ಜನಪರ ಕಾಳಜಿ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ’ ಎಂದಿದ್ದಾರೆ.

ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪಿಎಫ್‌ಐ ಮತ್ತು ಎಸ್‌ಡಿಪಿಐ ಮುಖಂಡರ ವಿರುದ್ಧದ ನೂರಾರು ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆದಿದ್ದರು. ಈಗಲೂ ಹಿಂದೂ ವಿರೋಧಿ ದೋರಣೆ ಅನುಸರಿಸುತ್ತಾ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ. ಗಲಭೆ ಹಾಗೂ ಮತೀಯ ಭಾವನೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ADVERTISEMENT

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಏಕೈಕ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಯಶಸ್ಸು ಕಂಡು ಹತಾಶರಾಗಿರುವ ಅವರು, ಒಳ್ಳೆಯ ಕೆಲಸಗಳನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.