ADVERTISEMENT

ಹುಬ್ಬಳ್ಳಿಯ ರುದ್ರಭೂಮಿಗಳು ಸ್ವಚ್ಛ

ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸ್ವಯಂಸೇವಕರಿಂದ ಶ್ರಮದಾನ

​ಪ್ರಜಾವಾಣಿ ವಾರ್ತೆ
Published 27 ಮೇ 2019, 4:04 IST
Last Updated 27 ಮೇ 2019, 4:04 IST
ಹುಬ್ಬಳ್ಳಿಯ ಈಶ್ವರ ನಗರದಲ್ಲಿರುವ ಸ್ಮಶಾಸನವನ್ನು ಮಹಾರಾಷ್ಟ್ರದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸ್ವಯಂಸೇವಕರು ಭಾನುವಾರ ಸ್ವಚ್ಛಗೊಳಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಈಶ್ವರ ನಗರದಲ್ಲಿರುವ ಸ್ಮಶಾಸನವನ್ನು ಮಹಾರಾಷ್ಟ್ರದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸ್ವಯಂಸೇವಕರು ಭಾನುವಾರ ಸ್ವಚ್ಛಗೊಳಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೇವದಂಡಾ ಪಟ್ಟಣದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಭಾನುವಾರ ನಗರದ ವಿವಿಧೆಡೆ ಇರುವ ರುದ್ರಭೂಮಿಗಳನ್ನು ಸ್ವಚ್ಛಗೊಳಿಸಲಾಯಿತು.

ಮಹಾರಾಷ್ಟ್ರದ ಕೊಲ್ಹಾಪುರ ಸೇರಿದಂತೆ ರಾಜ್ಯದ ಧಾರವಾಡ, ಕಲಬುರಗಿ, ಬೆಳಗಾವಿ, ಬೀದರ್, ವಿಜಯಪುರ, ಕೊಪ್ಪಳ, ಗದಗ ಜಿಲ್ಲೆಗಳಿಂದ ಬಂದಿದ್ದ ಐದು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು, ಹಳೇ ಗಬ್ಬೂರ, ಬಿಡ್ನಾಳ, ನೇಕಾರನಗರ, ಜನ್ನತ್‌ ನಗರ, ಕೌದಿಮಠ, ಇಂಡಿಪಂಪ್‌ ಸೇರಿದಂತೆ ಸುಮಾರು 15 ರುದ್ರಭೂಮಿಗಳನ್ನು ಸ್ವಚ್ಛಗೊಳಿಸಿದರು.

ಬೆಳಿಗ್ಗೆ 7ಕ್ಕೆ ಆರಂಭವಾದ ಸ್ವಚ್ಛತಾ ಅಭಿಯಾನ ಮಧ್ಯಾಹ್ನ 12ರವರೆಗೂ ನಡೆಯಿತು. ಮಹಾನಗರ ಪಾಲಿಕೆ ನೀಡಿದ್ದ 8 ಟ್ರ್ಯಾಕ್ಟರ್‌ ಮೂಲಕ ಸ್ಮಶಾನಗಳಲ್ಲಿನ ಕಸ ಹಾಗೂ ಮುಳ್ಳುಕಂಟಿಗಳನ್ನು ವಿಲೇವಾರಿ ಮಾಡಲಾಯಿತು. ಸ್ವಯಂ ಸೇವಕರಿಗೆ ಮಹಾನಗರ ಪಾಲಿಕೆ ಹ್ಯಾಂಡ್‌ ಗ್ಲೌಸ್‌, ಗಮ್‌ ಬೂಟ್‌ ಹಾಗೂ ಪ್ರಥಮ ಚಿಕಿತ್ಸಾ ಸಾಧನಗಳನ್ನು ನೀಡಿತ್ತು.

ADVERTISEMENT

ಸ್ವಚ್ಛತಾ ಅಭಿಯಾನದ ನಂತರ ಈಶ್ವರ ನಗರದ ರುದ್ರಭೂಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಹುಬ್ಬಳ್ಳಿ ಘಟಕದ ಪ್ರತಿನಿಧಿ ವಿಜಯ ಲಕ್ಕುಂಡಿ, ನಮ್ಮ ಪ್ರತಿಷ್ಠಾನದ ವತಿಯಿಂದ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಯಾವೊಂದು ಪ್ರತಿಫಲಾಪೇಕ್ಷೆಯಿಲ್ಲದೇ ಆಂದೋಲನದ ರೂಪದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ. ಜನರು ಜಾಗೃತಗೊಳ್ಳಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ ಎಂದರು.

**

ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಊಟ, ಉಪಾಹಾರ, ಪ್ರಯಾಣದ ವೆಚ್ಚವೇನೂ ನೀಡುವುದಿಲ್ಲ. ಇಂದು ಹಮ್ಮಿಕೊಂಡ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿದೆ.
-ವಿಜಯ ಲಕ್ಕುಂಡಿ, ಪ್ರತಿಷ್ಠಾನದ ಹುಬ್ಬಳ್ಳಿ ಘಟಕದ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.