ADVERTISEMENT

ಜನರನ್ನು ಸಂಕಷ್ಟಕ್ಕೆ ನೂಕುತ್ತಿರುವ ಮೋದಿ ಸರ್ಕಾರ: ಎಎಪಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 15:49 IST
Last Updated 20 ಆಗಸ್ಟ್ 2021, 15:49 IST
ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸಿಲಿಂಡರ್‌ನ ಅಣಕು ಶವ ಸಂಸ್ಕಾರ ನೆರವೇರಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ, ವಿ.ಜೋತೀಶ್‌ ಕುಮಾರ್‌, ಗೋಪಿನಾಥ್‌, ಪುಷ್ಪಾ ಕೇಶವ್‌, ಉಮರ್‌ ಷರೀಫ್‌, ಉಸ್ಮಾನ್‌, ವೀಣಾ ಸೆರ್ರಾವ್ ಇದ್ದರು- ಪ್ರಜಾವಾಣಿ ಚಿತ್ರ
ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸಿಲಿಂಡರ್‌ನ ಅಣಕು ಶವ ಸಂಸ್ಕಾರ ನೆರವೇರಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ, ವಿ.ಜೋತೀಶ್‌ ಕುಮಾರ್‌, ಗೋಪಿನಾಥ್‌, ಪುಷ್ಪಾ ಕೇಶವ್‌, ಉಮರ್‌ ಷರೀಫ್‌, ಉಸ್ಮಾನ್‌, ವೀಣಾ ಸೆರ್ರಾವ್ ಇದ್ದರು- ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೇ ಇದ್ದು, ಆ ಮೂಲಕ ಜನರನ್ನು ಸಂಕಷ್ಟಕ್ಕೆ ನೂಕುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ಟೀಕಿಸಿದರು.

ಅಡುಗೆ ಅನಿಲ ದರ ಏರಿಕೆ ಖಂಡಿಸಿ ಪಕ್ಷವು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಕೇಂದ್ರದ ವಿರುದ್ಧ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

‘ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಶೇ.50ರಷ್ಟು ಸಬ್ಸಿಡಿಯೊಂದಿಗೆ ₹400ಕ್ಕೆ ಅಡುಗೆ ಅನಿಲದ ಸಿಲಿಂಡರ್‌ ಸಿಗುತ್ತಿತ್ತು. ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕುವುದಾಗಿ ಹೇಳಿ ಮೋದಿ ಸರ್ಕಾರವು ಜನರನ್ನು ಮೂರ್ಖರನ್ನಾಗಿಸಿತು. ಈಗ ಪದೇ ಪದೇ ದರ ಏರಿಕೆ ಮಾಡುವ ಮೂಲಕ ಅವರ ಬದುಕನ್ನು ದುಸ್ತರಗೊಳಿಸುತ್ತಿದೆ’ ಎಂದು ದೂರಿದರು.

ADVERTISEMENT

‘ದೇಶದಲ್ಲಿ ಶ್ರೀಮಂತರನ್ನಷ್ಟೇ ಉಳಿಸಿಕೊಂಡು ಭಾರತವನ್ನು ವಿಶ್ವಗುರು ಮಾಡಲು ಬಿಜೆಪಿ ಹೊರಟಿರುವಂತಿದೆ. ಹೀಗಾಗಿಯೇ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ. ಹಿಂದಿನ ಒಂದು ವರ್ಷದಲ್ಲಿ ಸಿಲಿಂಡರ್‌ ಒಂದರ ಬೆಲೆಯನ್ನು ಒಟ್ಟು ₹265ರಷ್ಟು ಏರಿಸಲಾಗಿದೆ. ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಜನ, ಸರ್ಕಾರದ ಈ ಕ್ರಮದಿಂದ ದಿಕ್ಕುತೋಚದಾಗಿದ್ದಾರೆ’ ಎಂದರು.

‘ಉಜ್ವಲ ಯೋಜನೆಯ ಹೆಸರಿನಲ್ಲಿ ಜನರಿಗೆ ಅಡುಗೆ ಅನಿಲ ಸಂಪರ್ಕವನ್ನು ಉಚಿತವಾಗಿ ಕಲ್ಪಿಸಿಕೊಟ್ಟ ಕೇಂದ್ರ ಸರ್ಕಾರವು ಹೀಗೆ ಬೆಲೆ ಹೆಚ್ಚಿಸುತ್ತಾ ಹೋದರೆ ಸಾಮಾನ್ಯ ಜನ ಬದುಕುವುದಾದರೂ ಹೇಗೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಡುಗೆ ಅನಿಲದ ದರ ₹1 ಹೆಚ್ಚಾದರೂ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರು ಈಗ ಏಕೆ ಸುಮ್ಮನಿದ್ದಾರೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.