ADVERTISEMENT

ನಾಟ, ಸಿಇಟಿ ಪರೀಕ್ಷೆ ಒಂದೇ ದಿನ ನಿಗದಿ

ಒಂದೇ ಪರೀಕ್ಷೆ ಬರೆಯುವ ಅನಿವಾರ್ಯತೆಯಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳು

ಬಾಲಕೃಷ್ಣ ಪಿ.ಎಚ್‌
Published 27 ಮೇ 2019, 20:06 IST
Last Updated 27 ಮೇ 2019, 20:06 IST
   

ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಡಿಪ್ಲೊಮಾ ಸಿಇಟಿ ಮತ್ತು ನವದೆಹಲಿಯ ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ ನಡೆಸುವ ನಾಟ ಪರೀಕ್ಷೆಗೆ ಒಂದೇ ದಿನ ನಿಗದಿಯಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಉಂಟಾಗಿದೆ.

ನಾಟಕ್ಕೆ (ನ್ಯಾಷನಲ್‌ ಆ್ಯಪ್ಟಿಟ್ಯೂಡ್‌ ಆಫ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌) ಸಂಬಂಧಿಸಿದಂತೆ ನವದೆಹಲಿಯ ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ ಜನವರಿಯಲ್ಲಿ ನೋಟಿಫಿಕೇಶನ್‌ ಹೊರಡಿಸಿತ್ತು. ಅದರ ಪ್ರಕಾರ ಜನವರಿ 24ರಿಂದ ಜೂನ್‌ 12ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ತುಂಬಲು ಅವಕಾಶ ನೀಡಲಾಗಿದೆ. ಜುಲೈ 7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ದೇಶದಾದ್ಯಂತ ಪರೀಕ್ಷೆ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಹೊರಬೀಳಲಿದೆ.

2019–20ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಲ್ಯಾಟರಲ್‌ ಪ್ರವೇಶ ಯೋಜನೆಯಡಿ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಯ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೇ ತಿಂಗಳಲ್ಲಿ ಪ್ರಕಟಣೆ ನೀಡಿದೆ. ಅದರಂತೆ ಮೇ 24ರಿಂದ ಜೂನ್‌ 4ರವರೆಗೆ ಅರ್ಜಿ ತುಂಬಲು ಅವಕಾಶ ನೀಡಿದೆ.

ADVERTISEMENT

ಜುಲೈ 7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ 180 ಅಂಕಗಳ ಪರೀಕ್ಷೆ ಹಾಗೂ ಮಧ್ಯಾಹ್ನ 3ರಿಂದ 4ರವರೆಗೆ ಹೊರನಾಡ ಮತ್ತು ಗಡಿನಾಡ ಕನ್ನಡಿಗರಿಗೆ 50 ಅಂಕಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಘೋಷಿಸಿದೆ. ‘ನಾಟ’ದವರ ಪರೀಕ್ಷಾ ದಿನಾಂಕವನ್ನು ಗಮನಿಸದೇ ಅದೇ ದಿನವೇ ಕೆಇಎ ಕೂಡ ಪರೀಕ್ಷೆ ನಿಗದಿಪಡಿಸಿರುವುದು ಈಗ ಗೊಂದಲಕ್ಕೆ ಕಾರಣವಾಗಿದೆ.

ಒಂದೇ ಸಮಯದಲ್ಲಿ ಎರಡು ಪರೀಕ್ಷೆ ಬರೆಯಲು ಸಾಧ್ಯವಿಲ್ಲದ ಕಾರಣ ನಾಟ ಅಥವಾ ಸಿಇಟಿ ಇದರಲ್ಲಿ ಯಾವುದನ್ನು ಬರೆಯಬೇಕು, ಯಾವುದನ್ನು ಬಿಡಬೇಕು ಎಂದು ಗೊತ್ತಾಗುತ್ತಿಲ್ಲ ಎನ್ನುವುದು ಎರಡೂ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿರುವ ಡಿಪ್ಲೊಮಾ ವಿದ್ಯಾರ್ಥಿಗಳಾದ ಬಿ.ಎಂ. ಪ್ರಜ್ವಲ್‌, ಕೆ.ಸುರೇಶ್‌ ಮುಂತಾದವರ ಒತ್ತಾಯವಾಗಿದೆ.

ಪರೀಕ್ಷೆ ದಿನಾಂಕ ಬದಲಿಸಬಹುದು: ಒಂದೇ ದಿನ ಪರೀಕ್ಷೆ ನಿಗದಿಯಾಗಿರುವುದು ನಿಜವಾಗಿದ್ದರೆ ಕೆಇಎ ನಡೆಸುವ ಪರೀಕ್ಷೆಯ ದಿನಾಂಕವನ್ನು ಬದಲಿಸಲಾಗುವುದು. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಕೆಇಎ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ.ಎಸ್‌.ರವಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

**

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಬಾರದು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ. ಯಾರೂ ಹೆದರಬೇಕಿಲ್ಲ.
-ಜಿ.ಸಿ. ನಿರಂಜನ್‌, ಸಿಇಟಿ ನೋಡಲ್‌ ಅಧಿಕಾರಿ ದಾವಣಗೆರೆ, ಚಿತ್ರದುರ್ಗ

**

ನಾಟಕ್ಕೆ ₹ 1,800, ಸಿಇಟಿಗೆ ₹ 600 ಶುಲ್ಕ ಕಟ್ಟಿ ಪರೀಕ್ಷೆಗೆ ತಯಾರಿ ಮಾಡಿದ್ದೇವೆ. ಪರೀಕ್ಷೆ ಒಂದೇ ದಿನ ನಿಗದಿಯಾಗಿದೆ. ಇನ್ನೊಂದು ಪರೀಕ್ಷೆ ಒಂದು ವರ್ಷ ಕಾಯಬೇಕು.
-ಬಿ.ಎಂ. ಪ್ರಜ್ವಲ್‌, ಹರಪನಹಳ್ಳಿ ಡಿಪ್ಲೊಮಾ ವಿದ್ಯಾರ್ಥಿ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.