ADVERTISEMENT

ಎನ್‌ಸಿಇಆರ್‌ಟಿ ಪಠ್ಯ ಅಳವಡಿಕೆಗೆ ಬರಗೂರು ವಿರೋಧ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:30 IST
Last Updated 27 ಜೂನ್ 2019, 19:30 IST
ಪ್ರೊ.ಬರಗೂರು ರಾಮಚಂದ್ರಪ್ಪ
ಪ್ರೊ.ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳನ್ನುಯಥಾವತ್ತಾಗಿ ಅನುವಾದ ಮಾಡಿ ನೀಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈಹಾಕಬಾರದು. ಗುಣಮಟ್ಟ ಹೆಚ್ಚಳ ಮಾಡಬೇಕಿದ್ದರೆ ಪರಿಷ್ಕರಣೆ ಮಾಡಬಹುದು ಎಂದು‍‍ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಅಗತ್ಯ ಇದ್ದರೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುವುದು ಎಂಬ ನೂತನ ಶಿಕ್ಷಣ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಎರಡು ವರ್ಷಗಳಿಂದ ಜಾರಿಯಲ್ಲಿರುವ ಹೊಸ ಪಠ್ಯವನ್ನು ಪರಿಷ್ಕರಿಸಲೇಬಾರದು ಎಂದು ಹೇಳುತ್ತಿಲ್ಲ. ಇತರ ರಾಜ್ಯಗಳಲ್ಲಿನ ಪಠ್ಯಗಳನ್ನು ಹೋಲಿಕೆ ಮಾಡಿ ನೋಡಿ ಸುಧಾರಣೆ ತರುವುದು ಉತ್ತಮ. ಆದರೆ ಪರಿಷ್ಕರಣೆ ಹೆಸರಲ್ಲಿ ಎನ್‌ಸಿಇಆರ್‌ಟಿ ಪಠ್ಯವನ್ನೇ ಯಥಾವತ್ತಾಗಿ ಅನುವಾದ ಮಾಡಿ ಕೊಡುವುದಕ್ಕೆ ನನ್ನ ಸ್ಪಷ್ಟ ವಿರೋಧ ಇದೆ’ ಎಂದರು.

‘ಹಲವು ಪರಿಣಿತರ ಸಲಹೆ ಪಡೆದು ಹಾಗೂ ಎನ್‌ಸಿಇಆರ್‌ಟಿ ಪಠ್ಯಗಳನ್ನು ತುಲನೆ ಮಾಡಿಯೇ ಹೊಸ‌ಪಠ್ಯ ಸಿದ್ಧಪಡಿಸಲಾಗಿದೆ. ಪ್ರಾದೇಶಿಕ ಸೊಗಡು ಇಲ್ಲದೆ ಹೋದರೆ ಪಠ್ಯ ಅರ್ಥವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ 6ನೇ ತರಗತಿಯಿಂದ ರಾಜ್ಯ ಪಠ್ಯಕ್ರಮದಸಮಾಜ ವಿಜ್ಞಾನವನ್ನೇ ಒತ್ತಾಯಪೂರ್ವಕವಾಗಿ ಉಳಿಸಿಕೊಳ್ಳಲಾಗಿದೆ. ಸಚಿವರು ಸ್ಸತಃ ನನ್ನೊಂದಿಗೆ ಮಾತನಾಡಿ, ಎನ್‌ಸಿಇಆರ್‌ಟಿ ಪಠ್ಯವನ್ನು ಯಥಾವತ್ತು ಅಳವಡಿಸುವ ಪ್ರಸ್ತಾವ ಇಲ್ಲ ಎಂದಿದ್ದಾರೆ. ಹೀಗಿದ್ದರೂ ಪಠ್ಯಪುಸ್ತಕ ಪರಿಷ್ಕರಣೆ ವಿಷಯ ಗೋಜಲುಗೊಳ್ಳುವುದು ಸರಿಯಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.