ADVERTISEMENT

ಚರ್ಚೆಗೆ ಸಮಯ ಬೇಕು: ಎಚ್‌ಡಿಕೆ

ವಾಪಸ್ ಬನ್ನಿ– ಅತೃಪ್ತರಿಗೆ ಮನವಿ ಮಾಡಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:15 IST
Last Updated 21 ಜುಲೈ 2019, 20:15 IST
ಜೆಡಿಎಸ್ ಮುಖಂಡರು ಹಾಗೂ ಸಚಿವರಾದ ಸಿ.ಎಸ್ ಪುಟ್ಟರಾಜು, ಸಾರಾ ಮಹೇಶ್, ಜಿ.ಟಿ ದೇವೇಗೌಡ, ಶಾಸಕ ಶಿವಲಿಂಗೇಗೌಡ ಅವರು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭಾನುವಾರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಹಾಜರಿದ್ದರು.
ಜೆಡಿಎಸ್ ಮುಖಂಡರು ಹಾಗೂ ಸಚಿವರಾದ ಸಿ.ಎಸ್ ಪುಟ್ಟರಾಜು, ಸಾರಾ ಮಹೇಶ್, ಜಿ.ಟಿ ದೇವೇಗೌಡ, ಶಾಸಕ ಶಿವಲಿಂಗೇಗೌಡ ಅವರು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭಾನುವಾರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಹಾಜರಿದ್ದರು.   

ಬೆಂಗಳೂರು: ‘ಅನೈತಿಕ, ಕಾನೂನು ಬಾಹಿರ ವಿಧಾನಗಳಿಂದ ಅಧಿಕಾರಕ್ಕೆ ಬರಲು ಬಿಜೆಪಿ ಹಾತೊರೆಯುತ್ತಿದ್ದು, ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

‘ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೆ ವಿಶ್ವಾಸಮತ ನಿರ್ಣಯದ ಮೇಲೆ ವಿಸ್ತೃತ ಚರ್ಚೆ ನಡೆಯಲು ಹೆಚ್ಚು ಸಮಯ ಕೇಳಿದ್ದು, ಬಿಜೆಪಿಯ ಅನೈತಿಕ ಮಾರ್ಗಗಳ ಕುರಿತು ಶಾಸಕರು ಮಾತನಾಡಬೇಕಿದೆ. ಪ್ರಜಾಪ್ರಭುತ್ವ, ಸಂವಿಧಾನದ ಮೂಲತತ್ವ, ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಿದೆ’ ಎಂದು ತಿಳಿಸಿದ್ದಾರೆ.

ಅಧಿಕಾರ ಹಿಡಿಯುವ ಸಲುವಾಗಿ ವಿಶ್ವಾಸ ಗೊತ್ತುವಳಿ ನಿಲುವಳಿಯನ್ನು ಮತಕ್ಕೆ ಹಾಕುವಂತೆ ರಾಜಭವನದ ಮೂಲಕ ಗಡುವು ಕೊಡಿಸಲಾಗಿದೆ. ಬಿಜೆಪಿಯು ರಾಜ್ಯ ರಾಜಕಾರಣವನ್ನು ಪಾತಾಳಕ್ಕೆ ಕೊಂಡೊಯ್ದಿದ್ದು, ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿರುವುದು ಅತ್ಯಂತ ನೋವಿನ ಹಾಗೂ ಜಿಗುಪ್ಸೆ ತರುವ ಸಂಗತಿ ಎಂದು ಆರೋಪಿಸಿದ್ದಾರೆ.

ADVERTISEMENT

ಆಡಳಿತಾರೂಢ ಮೈತ್ರಿ ಪಕ್ಷಗಳ ಶಾಸಕರನ್ನು ಬಿಜೆಪಿಯು ಬಲವಂತವಾಗಿ ಕರೆದುಕೊಂಡು ಹೋಗಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ರಾಜೀನಾಮೆ ನೀಡಿದ ಶಾಸಕರ ಜತೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಶೇಷ ವಿಮಾನಗಳಲ್ಲಿ ತೆರಳಿರುವುದನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ನಮ್ಮಿಂದ ದೂರ ಹೋಗಿರುವ ಶಾಸಕರು ಹಿಂದಿರುಗಿ ಬಂದು ಅಧಿವೇಶನದಲ್ಲಿ ಭಾಗವಹಿಸಬೇಕು. ಬಿಜೆಪಿ ಹೇಗೆ ಬಲವಂತವಾಗಿ ಕರೆದೊಯ್ದಿದೆ ಎಂಬುದನ್ನು ಸದನದಲ್ಲಿ ಬಹಿರಂಗಪಡಿಸಬೇಕು. ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಹೇಗೆ ಹಾಳುಗೆಡವಿದೆ ಎಂಬುದನ್ನು ವಿವರಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

‘ಯಾವುದೇ ಹಿಂಜರಿಕೆಯಿಲ್ಲದೆ ಬನ್ನಿ. ನಿಮ್ಮ ಸಮಸ್ಯೆಗಳೂ ಸೇರಿದಂತೆ ಎಲ್ಲ ವಿಷಯಗಳ ಕುರಿತು ಒಟ್ಟಾಗಿ ಕುಳಿತು ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ. ರಾಜಕೀಯ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಬುನಾದಿಯನ್ನೇ ಅಲುಗಾಡಿಸಲಾಗುತ್ತಿದೆ. ಜನತಂತ್ರದಡಿ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳಿಂದ ಸರ್ಕಾರವನ್ನು ಪಾರು ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.