ADVERTISEMENT

ಆನ್‌ಲೈನ್‌ನಲ್ಲಿ ಆರ್‌ಟಿಇ ನೆರೆಹೊರೆ ಶಾಲೆಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:15 IST
Last Updated 7 ಮಾರ್ಚ್ 2019, 19:15 IST
   

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳ ಪ್ರವೇಶಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನೆರೆಹೊರೆ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿದೆ.

ಆನ್‌ಲೈನ್‌ ಮೂಲಕವೇ ತಮ್ಮ ಸಮೀಪದ ಶಾಲೆಗಳ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ‘ಶಿಕ್ಷಣ ನಮ್ಮ ಹಕ್ಕು’ ಎಂಬ ಪ್ರತ್ಯೇಕ ವೆಬ್‌ ಪುಟ ಸೃಷ್ಟಿಸಿದೆ.

ವೆಬ್‌ ಪುಟದಲ್ಲಿ ಜಿಲ್ಲೆ, ಬ್ಲಾಕ್‌ ಮತ್ತು ಯುನಿಟ್‌ ವಿಭಾಗಗಳಿವೆ. ಅಲ್ಲದೆ, ಕಂದಾಯ ಗ್ರಾಮ, ನಗರ ಸ್ಥಳೀಯ ವಾರ್ಡ್‌, ಕಾರ್ಪೊರೇಷನ್‌ ವಾರ್ಡ್‌ಗಳ ಉಪವಿಭಾಗಗಳಿವೆ. ಪೋಷಕರು ತಮ್ಮ ಊರು, ವಾರ್ಡ್‌ ಅಥವಾ ಗ್ರಾಮದ ವಿವರಗಳನ್ನು ಟೈಪ್‌ ಮಾಡಿದರೆ, ನೆರೆ ಹೊರೆ ಶಾಲೆಗಳ ವಿವರ ಸಿಗುತ್ತದೆ. ಅವುಗಳಲ್ಲಿ ಮಕ್ಕಳನ್ನು ದಾಖಲು ಮಾಡಬೇಕು. ನೆರೆ ಹೊರೆ ಶಾಲೆಗಳನ್ನು ಬಿಟ್ಟು ಬೇರೆ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಅವಕಾಶವಿಲ್ಲ.

ADVERTISEMENT

ಯಾವ ಶಾಲೆಗಳಿಗೆ ಸೇರಿಸಬಹುದು: ರಾಜ್ಯ ಸರ್ಕಾರ ‘ಶಿಕ್ಷಣ ಹಕ್ಕು ಕಾಯ್ದೆ’ಗೆ ತಿದ್ದುಪಡಿ ಮಾಡಿರುವುದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ಆರ್‌ಟಿಇ ಅಡಿ ಮಕ್ಕಳಿಗೆ ಪ್ರವೇಶ ಸಿಗುವುದಿಲ್ಲ.

ಹೊಸ ತಿದ್ದುಪಡಿಯಿಂದಾಗಿ ಯಾವುದೇ ಒಂದು ಪ್ರದೇಶ ಅಥವಾ ಗ್ರಾಮದಲ್ಲಿ ಮಕ್ಕಳಿಗೆ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆಗಳಿಗೇ ಮಕ್ಕಳನ್ನು ಸೇರಿಸಬೇಕು. ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಬಹುದು. ಒಂದು ವೇಳೆ ಆದೇಶ ಉಲ್ಲಂಘಿಸಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಿದರೆ, ಸರ್ಕಾರ ಅಂತಹ ಶಾಲೆಗಳಿಗೆ ಆರ್‌ಟಿಇ ಅಡಿ ಹಣ ಮರುಪಾವತಿ ಮಾಡುವುದಿಲ್ಲ.

ಪೋಷಕರ ಹಿಂಜರಿಕೆ: ಸರ್ಕಾರಿ ಶಾಲೆಗಳ ಗುಣಮಟ್ಟ ಚೆನ್ನಾಗಿಲ್ಲ. ಇಂಗ್ಲಿಷ್‌ ಮಾಧ್ಯಮವನ್ನೂ ಆರಂಭಿಸಿಲ್ಲ. ಇಂತಹ ಸ್ಥಿತಿಯಲ್ಲಿ ಬಡ ವರ್ಗದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹೇಗೆ ಸಾಧ್ಯ. ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ತಪ್ಪಿಸಲು ಸರ್ಕಾರ ಈ ಮಾರ್ಗ ಅನುಸರಿಸಿದೆ ಎಂದು ಕೆಲವು ಪೋಷಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.