ADVERTISEMENT

ರಾಜ್ಯದಲ್ಲಿ ಹೊಸ ಬಡಾವಣೆಗಳು

98 ಸ್ಥಳಗಳಲ್ಲಿ ₹7,275 ಕೋಟಿ ವೆಚ್ಚದಲ್ಲಿ ಕೆಎಚ್‌ಬಿಯಿಂದ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:24 IST
Last Updated 27 ನವೆಂಬರ್ 2020, 19:24 IST

ಬೆಂಗಳೂರು: ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಎಚ್‌ಬಿ) ವತಿಯಿಂದ ರಾಜ್ಯದ 98 ಸ್ಥಳಗಳಲ್ಲಿ ₹7,275 ಕೋಟಿ ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ವಸತಿ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳ ಬಡಾವಣೆಯನ್ನು ನಿರ್ಮಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಗಳಿಗಾಗಿ ವಿವಿಧ ತಾಲ್ಲೂಕುಗಳಲ್ಲಿ 7,853 ಎಕರೆ ಜಮೀನಿನಲ್ಲಿ 1,13,835 ನಿವೇಶನಗಳು ಮತ್ತು 3,960 ಮನೆಗಳನ್ನು ನಿರ್ಮಿಸಲಾಗುವುದು. ಇದರಿಂದ ಒಟ್ಟು 1,17,795 ಸ್ವತ್ತುಗಳು ನಿರ್ಮಾಣವಾಗಲಿದೆ. ಒಟ್ಟು 28 ಜಿಲ್ಲೆಗಳಲ್ಲಿ ತಾಲ್ಲೂಕು ಮತ್ತು ಅದಕ್ಕಿಂತ ಚಿಕ್ಕ ಪಟ್ಟಣಗಳಲ್ಲಿ ಬಡಾವಣೆ ನಿರ್ಮಿಸಲು ಒತ್ತು ನೀಡಲಾಗಿದೆ.

ADVERTISEMENT

ಬ್ಯಾಕ್‌ಲಾಗ್‌ ಹುದ್ದೆಗಳ ಸಂಪುಟ ಉಪಸಮಿತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿಯನ್ನು ಪುನರ್‌ ರಚನೆ ಮಾಡಲಾಗಿದೆ.

ಈ ಸಮಿತಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಈ ಹಿಂದೆ ಸಮಿತಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷರಾಗಿದ್ದರು. ಖಾತೆ ಬದಲಾವಣೆ ಆಗಿದ್ದರಿಂದ ಶ್ರೀರಾಮುಲು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ, ಕಾರಜೋಳ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಸಂಬಂಧ ರಚಿಸಲಾಗಿರುವ ಸಂಪುಟ ಉಪಸಮಿತಿಗೂ ಶ್ರೀರಾಮುಲು ಅಧ್ಯಕ್ಷರಾಗಿದ್ದಾರೆ.

ಪ್ರಮುಖ ನಿರ್ಣಯಗಳು
*
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ ₹384 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ. ಹಿಂದೆ ₹220 ಕೋಟಿಗೆ ಅನುಮೋದನೆ ನೀಡಲಾಗಿತ್ತು. ಈಗ ಹೆಚ್ಚುವರಿಯಾಗಿ ₹164 ಕೋಟಿ ನೀಡಲು ಒಪ್ಪಿಗೆ.
* ಧಾರವಾಡ ರೈಲ್ವೆ ನಿಲ್ದಾಣದ ಯಾರ್ಡ್‌ನಲ್ಲಿ ₹16.48 ಕೋಟಿ ಅಂದಾಜು ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ.
* ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ₹42.93 ಕೋಟಿ ಅನುದಾನ ನೀಡಲು ಅನುಮತಿ. ಬೆಳಗಾವಿ, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಮುದ್ದೇನಹಳ್ಳಿಯಲ್ಲಿ ಮೂಲಸೌಕರ್ಯಗಳ ಕಟ್ಟಡಗಳನ್ನು ನಿರ್ಮಿಸಲಾಗುವುದು.
* ಹೂಟ ಸಮಿತಿ ವರದಿಯ ಶಿಫಾರಸಿನ ಪ್ರಕಾರ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯಲ್ಲಿ 1:20 ರ ಬದಲಿಗೆ1:15 ಅನುಪಾತ ನಿಗದಿ ಮಾಡಿರುವ ನಿಯಮಾವಳಿ ತಿದ್ದುಪಡಿಗೆ ಒಪ್ಪಿಗೆ.
* ಜಿಂದಾಲ್‌ ಕಂಪನಿಗೆ ತೋರಣಗಲ್ ಸಮೀಪ 2,055 ಎಕರೆ ಸರ್ಕಾರಿ ಜಮೀನು ನೀಡಿರುವುದನ್ನು ಪುನರ್‌ ಪರಿಶೀಲನೆ ಮಾಡಲು ಸಂಪುಟ ಉಪಸಮಿತಿ ರಚಿಸಲಾಗುವುದು.
* ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಮಸ್ಕಿ ನಾಲಾ ಯೋಜನೆಯ ಬಲದಂಡೆ ಮತ್ತು ಎಡದಂಡೆ ಮುಖ್ಯ ಕಾಲುವೆಗಳ ಹಾಗೂ ವಿತರಣಾ ಕಾಲುವೆಗಳ ಆಧುನೀಕರಣಕ್ಕೆ ₹52.54 ಕೋಟಿ. ಇದಕ್ಕೆ ಯೋಜನಾ ವರದಿ ಪಡೆಯಲು ಒಪ್ಪಿಗೆ
* ಕಾರ್ಮಿಕರು ತಮ್ಮ 30 ರಜೆಗಳನ್ನು ಮುಂದಿನ ವರ್ಷದವರೆಗೆ ಉಳಿಸಿಕೊಂಡಲು ಹೋಗಲು ಇದ್ದ ಅವಕಾಶವನ್ನು 45 ರಜೆಗಳಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಲು ಒಪ್ಪಿಗೆ
* ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕು ಕರ್ಪೆ ಗ್ರಾಮದ ದೋಟ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಪರಿಷ್ಕೃತ ಅಂದಾಜು ₹36.34 ಕೋಟಿಗೆ ಅನುಮತಿ

ಹೊನ್ನಾಳಿ, ಹುಣಸಮಾರನಹಳ್ಳಿ ಪುರಸಭೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಹುಣಸಮಾರನಹಳ್ಳಿಯನ್ನು ಪುರಸಭೆಯನ್ನಾಗಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

ಹೊನ್ನಾಳಿ ಈವರೆಗೆ ಪಟ್ಟಣ ಪಂಚಾಯಿತಿ ಆಗಿತ್ತು ಎಂದು ಮಾಧುಸ್ವಾಮಿ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಜಾಲ ಹೋಬಳಿ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಟ್ಟು ಸೇರಿಸಿ ಪುರಸಭೆಯನ್ನಾಗಿ ಮಾಡಲು ಒಪ್ಪಿಗೆ ನೀಡಲಾಗಿದೆ.

ಹೊಸ ಪಟ್ಟಣ ಪಂಚಾಯತಿಗಳು: ಕೋಲಾರ ಜಿಲ್ಲೆಯ ವೇಮಗಲ್‌–ಕುರಗಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ, ಬೆಳಗಾವಿ ಜಿಲ್ಲೆ ಮಚ್ಚೆ, ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಜಾಲಹಳ್ಳಿ, ಬೆಳಗಾವಿ ಜಿಲ್ಲೆ ಕಾಗವಾಡ, ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕು ಮಂಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.