ADVERTISEMENT

ರಾಜಕೀಯ ಒತ್ತಡದಿಂದ ಪ್ರಕರಣ ದಾಖಲು: ಜೆಡಿಎಸ್‌ ಮುಖಂಡ ಇಸಾಕ್‌ ಖಾನ್‌ ಅಳಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 13:39 IST
Last Updated 28 ಜುಲೈ 2021, 13:39 IST

ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275ರ ಸ್ಯಾಂಡಲ್ ಕಾಡ್ ಬಳಿಯಲ್ಲಿ ನಡೆದ ಕಾರು ಅಪಘಾತದಲ್ಲಿ ರಾಜಕೀಯ ಒತ್ತಡದಿಂದ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅನ್ಯಧರ್ಮದವರು ಎಂಬ ಕಾರಣಕ್ಕೆ, ಅಪಘಾತ ಘಟನೆಯನ್ನು ದರೋಡೆ ಪ್ರಕರಣವೆಂದು ಬಿಂಬಿಸಿ ದೂರು ದಾಖಲಿಸಲಾಗಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಧ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ನಮ್ಮ ಮೇಲಿದ್ದು, ಅದಕ್ಕೆ ನಾವು ಸ್ಪಷ್ಟೀಕರಣ ನೀಡುತ್ತೇವೆ. ಅಪಘಾತ ಆಕಸ್ಮಿಕವಾಗಿ ಸಂಭವಿಸಿದೆ. ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಪೊಲೀಸ್‌ ಠಾಣೆಗೆ ನಾವೇ ಹೋಗಿ ವಿಚಾರಿಸಿದಾಗ ರಾಜಕೀಯ ಒತ್ತಡದಿಂದ ಪ್ರಕರಣ ದಾಖಲಿಸಿರುವುದು ತಿಳಿಯಿತು. ಇದು ನಮಗೆ ತುಂಬ ನೋವು ತರಿಸಿದೆ ಎಂದು ಹೇಳಿದರು.

ಪೊಲೀಸರು ಘಟನೆ ನಡೆದಾಗ ಸ್ಥಳದಲ್ಲಿದ್ದವರು ತೆಗೆದ ಫೋಟೊ ನೋಡಿಕೊಂಡು ಪ್ರಕರಣ ದಾಖಲಿಸುತ್ತಿದ್ದಾರೆ. ಪೊಲೀಸರಿಗೆ ಸತ್ಯಾಂಶ ತಿಳಿದಿದೆ. ಅಪಘಾತ ಪ್ರಕರಣದಲ್ಲಿ ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ನಮ್ಮ ಕುಟುಂಬದಲ್ಲೂ ಯೋಧರಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಆದರೆ, ಘಟನೆಯನ್ನು ಬೇರೆರೀತಿಯಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ. 25ರಿಂದ 30 ಪೊಲೀಸರು ಮನೆ ಸುತ್ತ ನಿಂತು ನಮ್ಮನ್ನು ಬಂಧಿಸಿದರು. ಇದರಿಂದ ನಮಗೂ ಆತಂಕವಾಯಿತು ಎಂದು ಹೇಳಿದರು.

ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ರಫೀಕ್ ಖಾನ್ ಮಾತನಾಡಿ, ‘ನನ್ನ ಕುಟುಂಬದ ಜೊತೆಗೆ, ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದೆ. ನಮ್ಮ ಕಾರು ಆಕಸ್ಮಿಕವಾಗಿ ಅವರ ಕಾರಿಗೆ ಡಿಕ್ಕಿಯಾದ ಮೇಲೆ ಸೈನಿಕ ಕುಟುಂಬಸ್ಥರೆಂದು ಹೇಳಲಾಗುವ ಕುಟುಂಬಸ್ಥರು ನಮ್ಮ ಮೇಲೆ ಮೊದಲು ಹಲ್ಲೆ ನಡೆಸಿದರು’ ಎಂದು ಮಾಹಿತಿ ನೀಡಿದರು.

‘ಪ್ರಕರಣ ತಿರುವು ಪಡೆದುಕೊಂಡು ನನ್ನ ಮೇಲೆ ದರೋಡೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಇದು ಸತ್ಯಕ್ಕೆ ದೂರವಾದುದು. ನನ್ನ ಕಾರು ಮೊದಲು ಡಿಕ್ಕಿಯಾಗಿದೆ. ನಾನೇಕೆ ಅವರ ಮೇಲೆ ಹಲ್ಲೆ ನಡೆಸಲಿ. ನಾಲ್ಕು ಜನಕ್ಕೆ ನೆರವು ನೀಡುವಷ್ಟು ಸಾಮರ್ಥ್ಯವಿದೆ. ಅವರ ಚಿನ್ನಾಭರಣ ತೆಗೆದುಕೊಳ್ಳುವ ಅಗತ್ಯವಿಲ್ಲ. ಪೊಲೀಸರಿಗೆ ತನಿಖೆ ಮಾಡಲು ಬಿಡಬೇಕು. ಅವರು ಘಟನೆಯ ಸಂಪೂರ್ಣ ತನಿಖೆ ನಡೆಸಲಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ತಮಗೆ ಬೇಕಾದಂತೆ ಅಭಿಪ್ರಾಯ ಹೇಳುತ್ತಿದ್ದಾರೆ. ಇದನ್ನು ಯಾರೂ ನಂಬಬಾರದು. ತನಿಖೆಯಲ್ಲಿ ಸತ್ಯಾಂಶ ತಿಳಿಯಲಿದೆ ಎಂದರು.

ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್, ಮಾಜಿ ಗ್ರಾ.ಪಂ ಅಧ್ಯಕ್ಷ ಕರೀಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.