ADVERTISEMENT

ಕೆನಡಾಕ್ಕೆ ಶ್ರೀಲಂಕಾ ಪ್ರಜೆಗಳ ಕಳ್ಳಸಾಗಣೆ: ನಾಲ್ವರಿಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 5:01 IST
Last Updated 25 ಜನವರಿ 2022, 5:01 IST

ಬೆಂಗಳೂರು: ’ಶ್ರೀಲಂಕಾದ ಮುಗ್ಧ ಪ್ರಜೆಗಳನ್ನು ಭಾರತಕ್ಕೆ ಕರೆತಂದು ಇಲ್ಲಿಂದ ವಿದೇಶಗಳಿಗೆ ಕಳ್ಳಸಾಗಣೆ ಮಾಡುವ ಜಾಲದ ಪ್ರಮುಖ ಸೂತ್ರಧಾರರಿಗೆ ನೀಡಲಾದ ಜಾಮೀನು ರದ್ದುಗೊಳಿಸಬೇಕು’ ಎಂದು ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

‘ನಗರದ ಸಿಸಿಎಚ್‌ನ ವಿಶೇಷ ಸೆಷನ್ಸ್‌ ನ್ಯಾಯಾಲಯ ನೀಡಿರುವ ಜಾಮೀನು ರದ್ದುಗೊಳಿಸಬೇಕು’ ಎಂದು ಕೋರಿ ಎನ್‌ಐಎ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಎನ್‌ಐಎ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್ ಸಲ್ಲಿಸಿದ ಆಕ್ಷೇಪಣೆಯನ್ನು ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿ ಆರೋಪಿಗಳಾದ ತಮಿಳುನಾಡಿನ ರಸೂಲ್‌ (24), ಸದ್ದಾಂ ಹುಸೇನ್‌ (24), ಅಬ್ದುಲ್‌ ಮಹೀತು (53) ಮತ್ತು ಸಾಕ್ರೆಟಿಸ್‌ (28) ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ADVERTISEMENT

ಆಕ್ಷೇಪಣೆಯಲ್ಲಿ ಏನಿದೆ?: ’ಶ್ರೀಲಂಕಾದ ಮುಗ್ಧ ಪ್ರಜೆಗಳನ್ನು ತಮಿಳುನಾಡಿನ ಸಮುದ್ರ ಮಾರ್ಗಗಳ ಮೂಲಕ ಅಕ್ರಮವಾಗಿ ಭಾರತಕ್ಕೆ ಕರೆತರಲಾಗುತ್ತದೆ. ಅವರನ್ನು ಇಲ್ಲಿಂದ ಕೆನಡಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ’ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

’ಕಳ್ಳ ಸಾಗಣೆ ಮಾಡಲಾಗುವ ಶ್ರೀಲಂಕಾ ಪ್ರಜೆಗಳಿಗೆ ತಲಾ ₹ 3 ಲಕ್ಷದಿಂದ ₹ 10 ಲಕ್ಷ ಪಡೆಯಲಾಗುತ್ತಿದೆ. ಪ್ರಕರಣದ ನಾಲ್ವರು ಆರೋಪಿಗಳು ತಮಿಳುನಾಡಿನವರಾಗಿದ್ದು ಅವರಿಗೆ ಶ್ರೀಲಂಕಾಕ್ಕೆ ಹೋಗಿ ಬರುವ ಸಮುದ್ರ ಮಾರ್ಗಗಳ ಪರಿಚಯ ಚೆನ್ನಾಗಿದೆ. ಒಂದು ವೇಳೆ ಅವರಿಗೆ ಜಾಮೀನು ನೀಡಿದರೆ ಅವರೆಲ್ಲಾ ಪರಾರಿಯಾಗುವ ಸಾಧ್ಯತೆಗಳಿವೆ’ ಎಂದು ಎನ್‌ಐಎ ವಿವರಿಸಿದೆ.

ಜಾಮೀನು ಪಡೆದಿರುವ ಆರೋಪಿಗಳನ್ನು ಮಂಗಳೂರಿನಲ್ಲಿ 2021ರ ಜೂನ್‌ 10ರಂದು ಬಂಧಿಸಲಾಗಿತ್ತು. ಇವರ ಜೊತೆ ಒಟ್ಟು 13 ಆರೋಪಿಗಳನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಂತೆಯೇ ಶ್ರೀಲಂಕಾದ 38 ಮುಗ್ಧ ಪ್ರಜೆಗಳನ್ನೂ ವಶಕ್ಕೆ ಪಡೆಯಲಾಗಿದ್ದು ಅವರನ್ನೆಲ್ಲಾ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.

ತಾತ್ಕಾಲಿಕ ಕೇಂದ್ರದಲ್ಲಿ ಸ್ಥಳವಿಲ್ಲದಿರುವ ಕಾರಣ 38 ಶ್ರೀಲಂಕಾ ಪ್ರಜೆಗಳನ್ನು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860, ವಿದೇಶಿಯರ ಕಾಯ್ದೆ–1946, ಪಾಸ್‌ಪೋರ್ಟ್‌ ಕಾಯ್ದೆ–1967ರ ವಿವಿಧ ಕಲಂಗಳಡಿ ಎನ್‌ಐಎ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.