ADVERTISEMENT

ಮಾತು ಕೇಳದಿದ್ದರೆ ನಮ್ಮ ದಾರಿ ನಮಗೆ: ರೇವಣ್ಣ

ನಿಗಮ ಮಂಡಳಿಗಳಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 19:50 IST
Last Updated 7 ಜನವರಿ 2019, 19:50 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಬೆಂಗಳೂರು: ‘ನಿಗಮ–ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ನಮ್ಮ (ಜೆಡಿಎಸ್‌) ಮಾತು ಕೇಳದಿದ್ದರೆ ನಮ್ಮ ದಾರಿ ನಮಗೆ, ಅವರ (ಕಾಂಗ್ರೆಸ್‌) ದಾರಿ ಅವರಿಗೆ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಗುಡುಗಿದರು.

ಕಾಂಗ್ರೆಸ್‌ ಹೈಕಮಾಂಡ್‌ ಶಿಫಾರಸು ಮಾಡಿದ ಶಾಸಕರ ಹೆಸರು ಕೈಬಿಟ್ಟ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಡೆಯ ವಿರುದ್ಧ ಕಾಂಗ್ರೆಸ್‌ ವಲಯದಲ್ಲಿ ವ್ಯಕ್ತವಾದ ವಿರೋಧಕ್ಕೆ ರೇವಣ್ಣ ಕಿಡಿಕಾರಿದ್ದಾರೆ.

‘ನಮ್ಮ‌ ಜಿಲ್ಲೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕೇಳುತ್ತೇವೆ. ಅವರು ಪಕ್ಷದ ಶಾಸಕರ ಅಭಿಪ್ರಾಯ ಕೇಳಬೇಕಾಗುತ್ತದೆ. ನಮಗೆ ನ್ಯಾಯ ಸಿಗಬೇಕು’ ಎಂದು ಹೇಳುವ ಮೂಲಕ ಜೆಡಿಎಸ್‌ ಪ್ರಾಬಲ್ಯದ ಜಿಲ್ಲೆಗಳ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಕಾಂಗ್ರೆಸ್‌ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ADVERTISEMENT

‘ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ನ ಆರು ಶಾಸಕರಿದ್ದೇವೆ. ನಮಗೆ ಸಿಗಬೇಕಾದ ಸ್ಥಾನಮಾನಗಳು ಸಿಗಲೇಬೇಕು. ನಮ್ಮ ಜಿಲ್ಲೆ ವಿಷಯದಲ್ಲಿ ನಮ್ಮ ಮಾತು ಕೇಳಬೇಕು’ ಎಂದು ಎಚ್ಚರಿಕೆ ನೀಡಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕಾರಣಕ್ಕೆ ಜೆಡಿಎಸ್‌ ವಿರುದ್ಧ ತಿರುಗಿಬಿದ್ದಿರುವ ಕಾಂಗ್ರೆಸ್ ಶಾಸಕ ಡಾ. ಸುಧಾಕರ್‌ಗೆ ತಿರುಗೇಟು ನೀಡಿದ ರೇವಣ್ಣ, ‘ನಾವು ಏಕೆ ಕಾಂಗ್ರೆಸ್‌ನವರಿಗೆ ನೀಡಿರುವ ನಿಗಮ ಮಂಡಳಿಗಳನ್ನು ತೆಗೆದುಕೊಳ್ಳಬೇಕು. ನಮಗೆ ಹೇಳಲು, ದೇವೇಗೌಡ ಕುಟುಂಬದ ಬಗ್ಗೆ ಹೇಳಲು ಅವನು ಯಾರು’ ಎಂದು ಖಾರವಾಗಿ ಪ್ರಶ್ನಿಸಿದರು. ‘ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರಿಗೆ ಈಗಾಗಲೇ ಈ ಬಗ್ಗೆ ಹೇಳಿದ್ದೇನೆ. ನಮ್ಮ ಪಕ್ಷದ ವಿಷಯ ನಮಗೆ ಇರಲಿ, ಅವರು ಅವರ ಪಕ್ಷದವರ ಮೇಲೆ ನಿಗಾ ಇಟ್ಟುಕೊಳ್ಳಲಿ’ ಎಂದು ಸಲಹೆ ನೀಡಿದರು.

*
ಕಾಂಗ್ರೆಸ್‌ ಪಟ್ಟಿ ಪ್ರಕಾರ ಕೆಲವು ನಿಗಮ ಮಂಡಳಿಗಳಿಗೆ ನೇಮಕ ಆಗಿಲ್ಲ. ಕಾರಣವೇನೆಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ.
-ಸಿದ್ದರಾಮಯ್ಯ,ಸಮನ್ವಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.