ADVERTISEMENT

ಪರಿಹಾರ ಪಡೆಯಲು ಫಲಾನುಭವಿಗಳೇ ಬರಲ್ಲ: ಅಶೋಕ

ಮನೆ ಹಾನಿ ಪರಿಹಾರ ರದ್ದತಿಗೆ ಚಿಂತನೆ: ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 20:06 IST
Last Updated 3 ಫೆಬ್ರುವರಿ 2021, 20:06 IST
ಆರ್‌. ಅಶೋಕ
ಆರ್‌. ಅಶೋಕ   

ಬೆಂಗಳೂರು: ‘ಅತಿವೃಷ್ಠಿಯಿಂದ ಸಂಪೂರ್ಣವಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರವಾಗಿ ರಾಜ್ಯ ಸರ್ಕಾರದಿಂದ ₹ 5 ಲಕ್ಷ ನೀಡಲಾಗುತ್ತಿದ್ದು, ಮೊದಲ ಕಂತು ₹ 1 ಲಕ್ಷ ಪಡೆದ ಅನೇಕ ಫಲಾನುಭವಿಗಳು ನಂತರದ ಕಂತು ಪಡೆಯಲು ಮುಂದೆ ಬರುತ್ತಿಲ್ಲ. ಈ ಫಲಾನುಭವಿಗಳಿಗೆ ಕಂತು ರದ್ದುಪಡಿಸುವ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪುರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅನೇಕರು ಕುಸಿದ ಮನೆಯನ್ನು ನೆಲಸಮ ಮಾಡಿ ಹೊಸತಾಗಿ ಕಟ್ಟಬೇಕಿತ್ತು. ಆದರೆ, ಅದರ ಬದಲು ₹ 1 ಲಕ್ಷ ಪಡೆದುಕೊಂಡು ಕುಸಿದ ಮನೆಯನ್ನೇ ದುರಸ್ತಿ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಬಾಗಲಕೋಟೆ ಜಿಲ್ಲೆಯಲ್ಲಿ 2019ರ ಪ್ರವಾಹದಿಂದ ಬೆಳೆ ಹಾನಿಗೆ ಒಳಗಾದ 1,063 ಸಂತ್ರಸ್ತರು ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಸರಿಯಾಗಿ ನಮೂದಿಸದೇ ಇರುವುದರಿಂದ ಇನ್‌ಪುಟ್‌ ಸಬ್ಸಿಡಿ ಪಾವತಿಸಲು ಬಾಕಿ ಇದೆ’ ಎಂದೂ ಅಶೋಕ ಹೇಳಿದರು.

ADVERTISEMENT

‘ಅರ್ಹ ಫಲಾನುಭವಿಗಳಿಗೆ ಹಣ ತಲುಪಬೇಕು. ದುರುಪಯೋಗ ತಪ್ಪಬೇಕು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಹೇಳಿದರು.

‘ಅತಿವೃಷ್ಟಿ ಸಂಭವಿಸಿ ವರ್ಷವಾಗುತ್ತಾ ಬಂದರೂ ಪರಿಹಾರಕ್ಕಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ. ಅಲ್ಲದೆ, ಹಣ ಮಂಜೂರು ಮಾಡುವಂತೆ ಭಾರಿ ಒತ್ತಡವೂ ಇದೆ. ಎಲ್ಲರಿಗೂ ಪರಿಹಾರ ನೀಡಲು ಇನ್ನೂ ₹ 5 ಸಾವಿರ ಕೋಟಿಯಿಂದ ₹ 6 ಸಾವಿರ ಕೋಟಿ ಹಣ ಬೇಕು’ ಎಂದು ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.