ADVERTISEMENT

ಹಿಂದಿನ ತಿಂಗಳ ಬಳಕೆ ಆಧರಿಸಿ ವಿದ್ಯುತ್ ಬಿಲ್‌: ಎಫ್‌ಕೆಸಿಸಿಐ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 5:16 IST
Last Updated 13 ಏಪ್ರಿಲ್ 2020, 5:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಲಾಕ್‌ಡೌನ್‌ನಿಂದ ಕೈಗಾರಿಕೆಗಳು, ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳು ತೀವ್ರ ನಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ, ಹಿಂದಿನ ತಿಂಗಳ ವಿದ್ಯುತ್‌ ಬಿಲ್‌ ಮೊತ್ತ ಆಧರಿಸಿ ವಿದ್ಯುತ್‌ ಶುಲ್ಕ ಸಂಗ್ರಹಿಸುವಂತೆ ಎಸ್ಕಾಂಗಳಿಗೆ ಇಂಧನ ಇಲಾಖೆ ನಿರ್ದೇಶಿಸಿರುವುದು ಸರಿಯಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಸಮಾಧಾನ ವ್ಯಕ್ತಪಡಿಸಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕತೆಯ ಬೆನ್ನೆಲುಬು ಇದ್ದಂತೆ. ದೇಶದ ಜಿಡಿಪಿಗೆ ದೊಡ್ಡ ಕೊಡುಗೆ ನೀಡುವ ವಲಯವಿದು. ಆರ್ಥಿಕ ಒತ್ತಡದ ಈ ಸಂದರ್ಭದಲ್ಲಿ ಈ ವಲಯಕ್ಕೆ ಉತ್ತೇಜನ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ, ಎಫ್‌ಕೆಸಿಸಿಐ ಅಧ್ಯಕ್ಷ ಜಿ.ಆರ್. ಜನಾರ್ದನ ಇಂಧನ ಇಲಾಖೆಗೆ ಪತ್ರ ಬರೆದಿದ್ದಾರೆ.

ಎಫ್‌ಕೆಸಿಸಿಐ ನೀಡಿರುವ ಸಲಹೆಗಳು

ADVERTISEMENT

* ವಾಣಿಜ್ಯೋದ್ಯಮಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳಿಗೆ ಮುಂದಿನ ಮೂರು ತಿಂಗಳು ವಿದ್ಯುತ್‌ ಬಿಲ್‌ ನೀಡುವುದನ್ನು ತಕ್ಷಣದಿಂದಲೇ ಜಾರಿ ಬರುವಂತೆ ಮುಂದೂಡಬೇಕು

* ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಂದಿನ 6 ತಿಂಗಳಿಂದ 9 ತಿಂಗಳವರೆಗಿನ (ಏ.1ರಿಂದ) ನಿಶ್ಚಿತ ಶುಲ್ಕ ಪಡೆಯಬಾರದು ಎಂದು ಎಲ್ಲ ಎಸ್ಕಾಂಗಳಿಗೆ ನಿರ್ದೇಶನ ನೀಡಬೇಕು

* ಆಯಾ ತಿಂಗಳು ಬಳಸಿದ ವಿದ್ಯುತ್‌ ಆಧಾರದ ಮೇಲೆ ಬಿಲ್‌ ನೀಡಬೇಕೆ ವಿನಾ, ಸರಾಸರಿ ಬಳಕೆ ಆಧರಿಸಿ ಅಥವಾ ಹಿಂದಿನ ತಿಂಗಳ ಬಳಕೆ ಆಧರಿಸಿ ಬಿಲ್‌ ನೀಡಬಾರದು ಎಂದು ಸೂಚಿಸಬೇಕು

* 2020-21ನೇ ಸಾಲಿನಲ್ಲಿ ವಿದ್ಯುತ್‌ ಶುಲ್ಕ ಏರಿಸುವ ಪ್ರಸ್ತಾವವನ್ನು ಎಸ್ಕಾಂಗಳು ಮುಂದಿಟ್ಟರೆ ಅದನ್ನು ಪರಿಗಣಿಸಬಾರದು ಎಂದು ಕೆಇಆರ್‌ಸಿಗೆ ಸರ್ಕಾರ ನಿರ್ದೇಶನ ನೀಡಬೇಕು

* ಈಗಾಗಲೇ, ಪಂಜಾಬ್, ಹರಿಯಾಣ, ಗೋವಾ, ಗುಜರಾತ್, ದೆಹಲಿ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಕೈಗಾರಿಕಾ ವಲಯಕ್ಕೆ ವಿದ್ಯುತ್‌ ರಿಯಾಯಿತಿ ಘೋಷಿಸಿದ್ದು, ಕರ್ನಾಟಕ ಸರ್ಕಾರವೂ ಇತ್ತ ಗಮನ ನೀಡಬೇಕು.
* ಜಿಎಸ್‌ಟಿ ನೆಟ್‌ವರ್ಕ್‌ ಅಡಿಯೇ ವಿದ್ಯುತ್‌ ಶುಲ್ಕವನ್ನೂ ಪರಿಗಣಿಸಬೇಕು ಎಂದು ಜಿಎಸ್‌ಟಿ ಮಂಡಳಿಗೆ ಸರ್ಕಾರ ಸಲಹೆ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.