ADVERTISEMENT

ರಸಗೊಬ್ಬರದ ಕೊರತೆಯಿಲ್ಲ: ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 16:24 IST
Last Updated 27 ಅಕ್ಟೋಬರ್ 2021, 16:24 IST
ಭಗವಂತ ಖೂಬಾ
ಭಗವಂತ ಖೂಬಾ   

ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಸುಳ್ಳು ಹೇಳಿ ರೈತರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ವಿಕಾಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈಗ 6.05 ಲಕ್ಷ ಟನ್‌ ರಸಗೊಬ್ಬರದ ದಾಸ್ತಾನು ಇದೆ. ನವೆಂಬರ್‌ ಅಂತ್ಯದವರೆಗೂ ರೈತರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಅಷ್ಟರಲ್ಲಿ ಮತ್ತಷ್ಟು ರಸಗೊಬ್ಬರ ರಾಜ್ಯಕ್ಕೆ ಪೂರೈಕೆಯಾಗಲಿದೆ. ರೈತರು ಆತಂಕಕ್ಕೊಳಗಾಗಬೇಕಾದ ಅಗತ್ಯವಿಲ್ಲ’ ಎಂದರು.

ರಾಜ್ಯದಲ್ಲಿ ಸದ್ಯ 2.27 ಲಕ್ಷ ಟನ್‌ ಯೂರಿಯಾ ದಾಸ್ತಾನು ಇದೆ. 28,420 ಟನ್‌ ಎಂಒಪಿ ರಸಗೊಬ್ಬರದ ದಾಸ್ತಾನಿದೆ. ಮೈಸೂರು ಭಾಗದಲ್ಲಿ ಯೂರಿಯಾ ಕೊರತೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ ಭಾಗಕ್ಕೆ ಕೇಂದ್ರ ಸರ್ಕಾರದಿಂದ ತಕ್ಷಣದಲ್ಲಿ 3,000 ಟನ್‌ ಯೂರಿಯಾ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

2021ರ ಅಕ್ಟೋಬರ್‌ನಿಂದ 2022ರ ಅಕ್ಟೋಬರ್‌ವರೆಗೆ ಕರ್ನಾಟಕದಲ್ಲಿ 16.94 ಲಕ್ಷ ಟನ್‌ ರಸಗೊಬ್ಬರಕ್ಕೆ ಬೇಡಿಕೆ ಇರಲಿದೆ ಎಂದು ಅಂದಾಜಿಸಲಾಗಿದೆ. ಅಷ್ಟೂ ಪ್ರಮಾಣದ ರಸಗೊಬ್ಬರವನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡಲಾಗುವುದು. ಕೇಂದ್ರ ಸರ್ಕಾರದ ಹಂಚಿಕೆಯಂತೆ ಆಯಾ ಜಿಲ್ಲೆಗಳಿಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಂಪ್ಲೆಕ್ಸ್‌ ರಸಗೊಬ್ಬರದ ಬಳಕೆ ಹೆಚ್ಚಾಗಿದೆ. ಕಾಂಪ್ಲೆಕ್ಸ್‌ ರಸಗೊಬ್ಬರದಿಂದ ಇಳುವರಿ ಹೆಚ್ಚಾಗುತ್ತಿದೆ. ಈ ಕಾರಣದಿಂದ ಡಿಎಪಿ ಬದಲಿಗೆ ಕಾಂಪ್ಲೆಕ್ಸ್‌ ಖರೀದಿಗೆ ಸೂಚಿಸಲಾಗುತ್ತಿದೆ. ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಖೂಬಾ ಹೇಳಿದರು.

ಯುಪಿಎ ಸರ್ಕಾರ ಕಾರಣ: 2008ರಲ್ಲಿ ರಸಗೊಬ್ಬರದ ಕೊರತೆಯಿಂದ ಹಾವೇರಿಯಲ್ಲಿ ಗೋಲಿಬಾರ್‌ ನಡೆದಿತ್ತು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಸಕಾಲಕ್ಕೆ ಗೊಬ್ಬರ ಪೂರೈಸದ ಕಾರಣದಿಂದ ದುರ್ಘಟನೆ ನಡೆದಿತ್ತು. ಅದನ್ನು ಸಿದ್ದರಾಮಯ್ಯ ಏಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರು.

ರಸಗೊಬ್ಬರ ದರ ಏರಿಕೆ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಡಿಎಪಿ ಹೊರತಾಗಿ ಯಾವುದೇ ರಸಗೊಬ್ಬರದ ದರದಲ್ಲಿ ಹೆಚ್ಚಳ ಆಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.