ಬೆಂಗಳೂರು: ಸಮರ್ಪಕವಾಗಿ ಜಾತಿವಾರು ಜನಗಣತಿ ನಡೆಸದೆ ಒಳಮೀಸಲಾತಿಯನ್ನು ಜಾರಿ ಮಾಡಬಾರದು ಎಂದು ಲಂಬಾಣಿ ಸಮುದಾಯದ ಮುಖಂಡರ ನಿಯೋಗವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ, ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಸಿ. ದ್ಯಾನಾಯಕ್ ನಿಯೋಗದ ನೇತೃತ್ವ ವಹಿಸಿದ್ದರು.
‘ಒಳಮೀಸಲಾತಿ ಕಲ್ಪಿಸಲು ಸಂಪೂರ್ಣ ವೈಜ್ಞಾನಿಕ ದತ್ತಾಂಶ ಇಲ್ಲದಿರುವುದರಿಂದ, ಆಯೋಗವು ವೈಜ್ಞಾನಿಕ ದತ್ತಾಂಶ ಸಂಗ್ರಹಿಸುವವರೆಗೂ ಈ ಕುರಿತು ತೀರ್ಮಾನ ಕೈಗೊಳ್ಳಬಾರದು. ಸ್ವಾತಂತ್ರ್ಯಪೂರ್ವದಿಂದಲೂ ಬಹುಸಂಖ್ಯಾತರಾಗಿ ಅಲೆಮಾರಿ ಬುಡಕಟ್ಟು ಹಿನ್ನೆಲೆಯಿಂದ ಬಂದ, ಬಂಜಾರ, ಲಂಬಾಣಿ ಹಾಗೂ ಸುಗಾಲಿ ಸಮುದಾಯದ ಜನರು ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯ ಹಾಗೂ ಅಭಿವೃದ್ಧಿವಾರು ಯೋಜನೆಗಳ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ. ಹೀಗಾಗಿ, ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಸಂವಿಧಾನಬದ್ಧವಾಗಿ ಈ ಸಮುದಾಯಕ್ಕೆ ಸಿಗಬೇಕಾದಷ್ಟು ಸೌಲಭ್ಯಗಳು ಹಾಗೂ ಮಾನ್ಯತೆ ಸಿಗದೆ ಇರುವುದು ದುರದೃಷ್ಟಕರ’ ಎಂದು ಎ.ಆರ್. ಗೋವಿಂದಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
‘ತಳ ಮಟ್ಟದಿಂದಲೇ ಎಲ್ಲ ರೀತಿಯ ವಾಸ್ತವ ದತ್ತಾಂಶ ಸಂಗ್ರಹಿಸುವವರೆಗೂ, ಬಂಜಾರ ಸಮುದಾಯದ ನಿಖರ ಜಾತಿವಾರು ಜನಗಣತಿಯ ದತ್ತಾಂಶ ಆಯೋಗಕ್ಕೆ ಸೇರುವವರೆಗೂ ಆಯೋಗವು ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳಬಾರದು’ ಎಂದು ಅವರು ನಾಗಮೋಹನದಾಸ್ ಅವರಿಗೆ ಮನವಿ ಮಾಡಿದ್ದಾರೆ.
ಬಂಜಾರ ಮಹಿಳಾ ಸಂಘದ ಅಧ್ಯಕ್ಷೆ ಲಲಿತಮ್ಮ, ಮುಖಂಡರಾದ ಡಿ. ಪರಮೇಶ್ ನಾಯಕ್, ಧರ್ಮರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.