ಬೆಂಗಳೂರು: ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಬಹುಮಹಡಿ ಕಟ್ಟಡದಲ್ಲಿ ಕೊಠಡಿ ನೀಡಬಾರದು. ಈಗಾಗಲೇ ನೀಡಿರುವ ಕೊಠಡಿಗಳನ್ನು ತೆರವುಗೊಳಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬಹುಮಹಡಿ ಕಟ್ಟಡದಲ್ಲಿದ್ದ ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೇರಿದ ಮೂರು ಕೊಠಡಿಗಳನ್ನು ನಿಗಮ, ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳ ಕಚೇರಿಗೆ ನೀಡಲಾಗಿದೆ. ಅನುಮತಿ ಪಡೆಯದೆ ಆ ಕಟ್ಟಡಗಳ ದುರಸ್ತಿ, ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಅವುಗಳನ್ನು ತೆರವುಗೊಳಿಸಬೇಕು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಕರ್ನಾಟಕ ಸರ್ಕಾರ ಸಚಿವಾಲಯ ವ್ಯಾಪ್ತಿಯ ಕಟ್ಟಡಗಳಾದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡ ವ್ಯಾಪ್ತಿಯಲ್ಲಿ ಸಚಿವಾಲಯದ ಕಚೇರಿಗಳನ್ನು ಹೊರತುಪಡಿಸಿ ಇತರೆ ಇಲಾಖೆ, ನಿಗಮ ಮಂಡಳಿಗಳ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸಬಾರದು ಎಂದು ಮನವಿಯಲಿ ಹೇಳಿದ್ದರು.
ಮನವಿಯನ್ನು ಪರಿಗಣಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಅನುಮತಿ ಪಡೆಯದೇ ನಿಗಮ, ಮಂಡಳಿಗಳಿಗೆ ಸ್ಥಳಾವಕಾಶ ಕಲ್ಪಿಸಿದ, ನವೀಕರಣ ಕಾಮಗಾರಿಗಳನ್ನು ಕೈಗೊಂಡ ಅಧಿಕಾರಿಗಳ ಕ್ರಮವನ್ನು ನಿಯಮಬಾಹಿರ ಎಂದಿದ್ದು, ತಕ್ಷಣ ತೆರವುಗೊಳಿಸಲು ಆದೇಶಿಸಿದೆ. ಇನ್ನು ಮುಂದೆ ನಿಗಮ, ಮಂಡಳಿ, ಆಯೋಗ, ಪ್ರಾಧಿಕಾರ, ಇತರೆ ಸಂಸ್ಥೆಗಳ ಕಚೇರಿಗಳಿಗೆ ಉಪಯೋಗಿಸಬಾರದು ಎಂದು ಕಾರ್ಯದರ್ಶಿ ಜಿ.ಸತ್ಯವತಿ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.