ADVERTISEMENT

ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಿಲ್ಲ: ಸಿದ್ದರಾಮಯ್ಯ

ಕೋಮುದ್ವೇಷ ಉಗುಳುವ ಪ್ರಧಾನಿ ಮೋದಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 16:32 IST
Last Updated 15 ಏಪ್ರಿಲ್ 2025, 16:32 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕರ್ನಾಟಕದಲ್ಲಿ  ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆಯೇ ಹೊರತು ಧರ್ಮದ ಆಧಾರದಲ್ಲಿ ನೀಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ.

‘ಪರಿಶಿಷ್ಟರು ಮತ್ತು ಹಿಂದುಳಿದವರ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದ್ದಾರೆ. ಇಂತಹ ತಲೆಬುಡ ಇಲ್ಲದ ಆರೋಪಗಳನ್ನು ಮಾಡುವಾಗ, ಪ್ರಧಾನಿಯವರು ಕನಿಷ್ಠ ವಾಸ್ತವಾಂಶ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ಹೇಳಿದ್ದಾರೆ.

‘ತ್ರಿವಳಿ ತಲಾಖ್‌ ನಿಷೇಧ ಮಾಡಿದ್ದೇವೆ, ವಕ್ಫ್‌ ಕಾಯ್ದೆಗೆ ತಿದ್ದುಪಡಿ ಮಾಡಿದ್ದೇವೆ ಎಂದು ಒಂದು ಕಡೆ ತಮ್ಮನ್ನು ಮುಸ್ಲಿಂ ಸಮುದಾಯದ ಸುಧಾರಕರಂತೆ ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿ, ಇನ್ನೊಂದೆಡೆ ಬಜರಂಗ ದಳದ ಕಾರ್ಯಕರ್ತನಂತೆ ಕೋಮುದ್ವೇಷ ಉಗುಳುತ್ತಿದ್ದಾರೆ. ಇದು ಅವರು ಕೂತಿರುವ ಕುರ್ಚಿಗೆ ಮಾಡುತ್ತಿರುವ ಅಪಮಾನ’ ಎಂದು ಹೇಳಿದ್ದಾರೆ.

ADVERTISEMENT

‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದಾರೆ ಎನ್ನುವುದು ಹಸಿ ಸುಳ್ಳು. ದೇಶದ ಪ್ರಧಾನಿ ಮೋದಿ ಅವರು ಹೇಳಿರುವುದು ಅತ್ಯಂತ ವಿಷಾದನೀಯ. ಮತೀಯ ದ್ವೇಷ ಹುಟ್ಟಿಸಬೇಕೆಂಬ ಏಕೈಕ ದುರುದ್ದೇಶದಿಂದ ಈ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

‘ಅಂಬೇಡ್ಕರ್ ಅವರ ಭಾಷಣ ಮತ್ತು ಬರವಣಿಗೆಗಳ ಹನ್ನೆರಡು ಸಂಪುಟಗಳನ್ನು ಮಹಾರಾಷ್ಟ್ರ ಸರ್ಕಾರ ಹಲವು ವರ್ಷಗಳ ಹಿಂದೆಯೇ ಪ್ರಕಟ ಮಾಡಿದೆ. ಅವುಗಳ ಕನ್ನಡ ಅನುವಾದವನ್ನು ನಮ್ಮ ಸರ್ಕಾರವೇ ಮುದ್ರಿಸಿದೆ. ಅಲ್ಲೆಲ್ಲಾದರೂ ಧರ್ಮಾಧಾರಿತ ಮೀಸಲಾತಿ ಬೇಡ ಎನ್ನುವ ಅಂಬೇಡ್ಕರ್ ಅವರ ಅಭಿಪ್ರಾಯ ಉಲ್ಲೇಖ ಇದ್ದರೆ ದೇಶದ ಜನರ ಮುಂದಿಡಬೇಕು. ಇಲ್ಲವಾದರೆ, ಇಂತಹದ್ದೊಂದು ಸುಳ್ಳನ್ನು ಹೇಳಿರುವುದಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆಯೇ ಹೊರತು ಕಡಿಮೆ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಸಮಿತಿ ಶಿಫಾರಸಿನ ಆಧಾರದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಅವರಿಂದ ಕಿತ್ತುಕೊಳ್ಳುವುದು ಎಲ್ಲಿಂದ ಬಂತು? ಕನಿಷ್ಠ ಮಾಹಿತಿಯೂ ಇಲ್ಲದ ಮೋದಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ತಮ್ಮ ಘನತೆಯನ್ನು ತಾವೇ ಹಾಳುಗೆಡಹುತ್ತಿದ್ದಾರೆ’ ಎಂದಿದ್ದಾರೆ.

‘ಮುಸ್ಲಿಮರಲ್ಲಿನ ಹಿಂದುಳಿದಿರುವಿಕೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮೋದಿಯವರು ತಿಳಿದುಕೊಳ್ಳಲು ಬಯಸುವುದಾದರೆ ಈ ಬಗ್ಗೆ ಅಧ್ಯಯನ ಮಾಡಿರುವ ಸಾಚಾರ್‌ ಸಮಿತಿಯ ವರದಿಯನ್ನು ಪರಿಶೀಲಿಸುವ ಕಷ್ಟ ತೆಗೆದುಕೊಳ್ಳಬೇಕು. ಆ ವರದಿಯ ಪ್ರಕಾರ ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತಲೂ ಕಡಿಮೆ ಇದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.