ADVERTISEMENT

ಬಂಡೀಪುರ ರಾತ್ರಿ ಸಂಚಾರಕ್ಕೆ ಅವಕಾಶವಿಲ್ಲ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 16:25 IST
Last Updated 9 ಸೆಪ್ಟೆಂಬರ್ 2022, 16:25 IST

ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಇತ್ತೀಚೆಗೆ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಪರಿಷತ್‌ ಸಭೆಯ ವೇಳೆ ಕೇರಳದ ಕೆಲ ಸಚಿವರು ಮುಖ್ಯಮಂತ್ರಿಯವರಿಗೆ ಈ ಸಂಬಂಧ ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಕಾಡು ಅತಿ ಮುಖ್ಯ, ನಾವು ಏನನ್ನಾದರೂ ಮರು ಸೃಷ್ಟಿಸಬಹುದು. ಅಮೂಲ್ಯ ಕಾಡನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕಾಡನ್ನು ಮುಟ್ಟಲೂ ಬಾರದು. ರಾಜ್ಯ ಮತ್ತು ದೇಶದಲ್ಲಿ ಈಗ ನೈಸರ್ಗಿಕವಾಗಿ ಏನೆಲ್ಲ ಅನಾಹುತಗಳಾಗುತ್ತಿವೆ ಎಂಬುದನ್ನು ನೋಡಿದ್ದೇವೆ. ಕಾಡಿಗೆ ಹಾನಿ ಆಗುವಂತಹದ್ದು ಏನೂ ಮಾಡಬಾರದು ಎಂಬುದು ನನ್ನ ಖಚಿತ ನಿಲುವು’ ಎಂದು ಅವರು ಹೇಳಿದರು.

ADVERTISEMENT

ಬೆಂಗಳೂರಿನಿಂದ ಸೇಲಂಗೆ ಕನಕಪುರ, ಮಳವಳ್ಳಿ, ಯಳಂದೂರು, ಕೊಳ್ಳೇಗಾಲ, ಸತ್ತೇಗಾಲ ಮಾರ್ಗವಾಗಿ ಹೊಸ ಹೆದ್ದಾರಿ ನಿರ್ಮಾಣ ಮಾಡಬೇಕು. ಈ ಮಾರ್ಗದಲ್ಲಿ ಸೇಲಂಗೆ 60 ಕಿ.ಮೀ. ಕಡಿಮೆ ಆಗುತ್ತದೆ. ಇಲ್ಲಿ 9 ಕಿ.ಮೀ ಅರಣ್ಯ ಬರುತ್ತದೆ. ಸುಮಾರು 5 ಕಿ.ಮೀ ಸುರಂಗದ ಮಾರ್ಗ ನಿರ್ಮಿಸಿದರೆ, ಅರಣ್ಯವೂ ಹಾಗೆ ಉಳಿಯುತ್ತದೆ. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.

ಧರ್ಮಸ್ಥಳದಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪನೆಯ ಸಂಬಂಧ ₹10 ಕೋಟಿಗೆ ಡಿಪಿಆರ್‌ ಮಾಡಲಾಗಿದೆ. ವಿಮಾನ ನಿಲ್ದಾಣಕ್ಕಾಗಿ 100 ಎಕರೆ ಜಮೀನು ಅಗತ್ಯವಿದೆ. ಅದರ ಪರಿಶೀಲನೆಗೆ ಅಧಿಕಾರಿಗಳು ಹೋಗಿದ್ದಾರೆ. ಉಜಿರೆ ಸಮೀಪ ಜಮೀನು ಲಭ್ಯವಿದೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳದ ಡಿ.ವಿರೇಂದ್ರ ಹೆಗ್ಗಡೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ವಿಜಯಪುರ ವಿಮಾನ ನಿಲ್ದಾಣದ ಉದ್ಘಾಟನೆಯೂ ಶೀಘ್ರವೇ ನೆರವೇರಲಿದೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಹೈದರಾಬಾದ್ ವಿಮೋಚನಾ ದಿನದಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸೋಮಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.