ADVERTISEMENT

ಡ್ರಗ್ಸ್ ಮಾಹಿತಿ ನೀಡಲು ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 9:37 IST
Last Updated 29 ಆಗಸ್ಟ್ 2020, 9:37 IST
ನಿರ್ದೇಶಕ ಇಂದ್ರಜಿತ್ ಲಂಕೇಶ್
ನಿರ್ದೇಶಕ ಇಂದ್ರಜಿತ್ ಲಂಕೇಶ್   

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಕಲೆಹಾಕಲು ಸಿಸಿಬಿ ಪೊಲೀಸರು ಮುಂದಾಗಿದ್ದು, ಈ ಸಂಬಂಧ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ.

ಕೆಲ ನಟ – ನಟಿಯರು ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದಡಿ ಕೇರಳದ ಡಿ. ಅನಿಕಾ ಸೇರಿದಂತೆ ಮೂವರನ್ನು ಎನ್‌ಸಿಬಿ ಅಧಿಕಾರಿಗಳು ಇತ್ತೀಚೆಗಷ್ಟೇ ಬಂಧಿಸಿದ್ದರು.
ಇದರ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್, ‘ಸ್ಯಾಂಡಲ್‌ವುಡ್‌ನ ಹಲವರು ಡ್ರಗ್ಸ್ ಮಾರಾಟದಿಂದಲೇ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಇದೀಗ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು, ಡ್ರಗ್ಸ್ ದಂಧೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಖಚಿತ ಮಾಹಿತಿ ನೀಡುವಂತೆ ಕೋರಿ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದಾರೆ.

ADVERTISEMENT

‘ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಾರ್ಕ್‌ನೆಟ್ ಮೂಲಕ ನಡೆಯುವ ದಂಧೆಯನ್ನೂ ಭೇದಿಸಿದ್ದೇವೆ. ಮಾಹಿತಿ ನೀಡಲು ಉಚಿತ ಸಹಾಯವಾಣಿ 1098 ಕೆಲಸ ಮಾಡುತ್ತಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

'ಕೆಲ ಮಾಧ್ಯಮಗಳಲ್ಲಿ ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ದಂಧೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಖಚಿತ ಮಾಹಿತಿ ಪಡೆಯಲು ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಬಂದು ಹೇಳಿಕೆ ನೀಡಿದ ನಂತರ ತನಿಖೆ ಮುಂದುವರಿಯಲಿದೆ’ ಎಂದೂ ತಿಳಿಸಿದರು.

ಡ್ರಗ್ಸ್ ದಂಧೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ಎನ್‌ಸಿಬಿ ತನಿಖೆ ಮಾಡುತ್ತಿದೆ. ಸ್ಥಳೀಯವಾಗಿ ಯಾವುದೇ ಮಾಹಿತಿ ಕೇಳಿದರೂ ಅವರೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.