ADVERTISEMENT

ಎನ್‌ಎಸ್‌ಎಸ್‌ ಶಿಬಿರದಲ್ಲಿ ಮೊಬೈಲ್‌ ನಿಷೇಧ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:15 IST
Last Updated 20 ನವೆಂಬರ್ 2018, 20:15 IST

ಬೆಂಗಳೂರು: ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ವಾರ್ಷಿಕ ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಳಸದಂತೆ ನೋಡಿಕೊಳ್ಳಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ಸೂಚಿಸಿದೆ.

ಶಿಬಿರಾರ್ಥಿಗಳು ಕೆರೆ, ನದಿ, ಸಮುದ್ರ, ಪ್ರಪಾತದ ಸ್ಥಳಗಳಲ್ಲಿ ಛಾಯಾಚಿತ್ರಗಳನ್ನು (ಸೆಲ್ಫಿ) ತೆಗೆದುಕೊಳ್ಳಲು ಹೋಗಿ ಪ್ರಾಣಾಪಾಯ ತಂದುಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ಜಲಮೂಲಗಳ ಸಮೀಪದಲ್ಲಿ ಶಿಬಿರಗಳನ್ನು ಆಯೋಜಿಸಬೇಡಿ ಎಂದು ಸುತ್ತೋಲೆ ಮೂಲಕ ನಿರ್ದೇಶನ ನೀಡಿದೆ.

ವಿಶ್ವವಿದ್ಯಾಲಯದ ಪ್ರಕಾರ, ‘6 ವರ್ಷಗಳಲ್ಲಿ ಈ ಶಿಬಿರಗಳಲ್ಲೇ 9 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇಂತಹ ದುರ್ಘಟನೆಗಳು ಬೇರೆ ರಾಜ್ಯದ ಶಿಬಿರಗಳಲ್ಲೂ ಮರುಕಳಿಸುತ್ತಿವೆ.’

ADVERTISEMENT

ಶಿಬಿರ ಆಯೋಜನೆಗೆ ಸೂಚನೆ

*ಕೆರೆ, ಸರೋವರ, ಅಣೆಕಟ್ಟುಗಳ ಪಕ್ಕದಲ್ಲಿ ಶಿಬಿರ ಆಯೋಜಿಸಬೇಡಿ

*ಟ್ರಕಿಂಗ್‌ ಕೈಗೊಳ್ಳಬೇಡಿ

*ಶಿಬಿರದ ಕುರಿತು ಸ್ಥಳೀಯ ಠಾಣೆಗೆ ಮಾಹಿತಿ ನೀಡಿ

*ಅಪಾಯಕಾರಿ ಸ್ಥಳಗಳಲ್ಲಿ ಫೋಟೊ ತೆಗೆಯಲು ಅವಕಾಶ ನೀಡಬೇಡಿ

*ಕಡ್ಡಾಯವಾಗಿ ಮಹಿಳಾ ಅಧ್ಯಾಪಕರನ್ನೂ ನಿಯೋಜಿಸಿ

*ಶಿಬಿರ ಸ್ಥಳದಲ್ಲಿ ವಾಹನ ಸೌಲಭ್ಯವಿರಲಿ

ಶಿಕ್ಷಣ ಇಲಾಖೆ ಸಮೀಕ್ಷೆಗೆ ಕೈಜೋಡಿಸಲು ನಿರ್ದೇಶನ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ವಿವಿಧ ಇಲಾಖೆಯ ಸಿಬ್ಬಂದಿಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರ ತಂಡವು ನ.17ರಿಂದ 28ರವರೆಗೆ ಮನೆ–ಮನೆಗೆ ಭೇಟಿ ನೀಡಿ, ಶಾಲೆ ಬಿಟ್ಟ ಮಕ್ಕಳನ್ನು ಲೆಕ್ಕಹಾಕುತ್ತಿದೆ. ಈ ಕಾರ್ಯಕ್ಕೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಕಾರ ಪಡೆಯಲು ಇಲಾಖೆ ನಿರ್ದೇಶನ ನೀಡಿದೆ.

ಹಾಗಾಗಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತೊಂದು ಸುತ್ತೋಲೆ ಮೂಲಕ ತಿಳಿಸಿದೆ.

ಆದ್ದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಶಿಬಿರದ ಮಾಹಿತಿ ನೀಡಿ, ಅವರಿಂದ ಲಿಖಿತ ಒಪ್ಪಿಗೆ ಪಡೆಯಲು ತಿಳಿಸಿದೆ. ಹಾಗೆಯೇ ‘ಶಿಬಿರದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುವುದಾಗಿ’ ವಿದ್ಯಾರ್ಥಿಗಳಿಂದ ಒಕ್ಕಣಿಕೆ ಪಡೆದುಕೊಳ್ಳಲು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.